ನೆನಪಾಗಿ ಕಾಡುವ ದ್ರೋಣ-ರಾಜೇಂದ್ರ ಸಮಾಧಿಗಳು!

ನೆನಪಾಗಿ ಕಾಡುವ ದ್ರೋಣ-ರಾಜೇಂದ್ರ ಸಮಾಧಿಗಳು!

LK   ¦    Jan 10, 2017 11:57:20 AM (IST)

ಮೈಸೂರು: ಮನುಷ್ಯ ಸತ್ತಾಗ ಆತನಿಗೊಂದು ಸಮಾಧಿ ನಿರ್ಮಾಣ ಮಾಡುವುದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಆದರೆ ಪ್ರಾಣಿಗಳಿಗೆ ಸಮಾಧಿ ಕಟ್ಟುವುದು ಅಪರೂಪ.

ಕೆಲವು ಶ್ರೀಮಂತರು ತಮ್ಮ ಅಚ್ಚು ಮೆಚ್ಚಿನ ಸಾಕು ಪ್ರಾಣಿ ಸತ್ತಾಗ ಅದರ ನೆನಪಿಗಾಗಿ ಸಮಾಧಿ ನಿರ್ಮಿಸಿದ ಉದಾಹರಣೆಗಳು ಅಲ್ಲಲ್ಲಿ ಸಿಗಬಹುದು. ಆದರೆ ಸಾರ್ವಜನಿಕವಾಗಿ ಅದರಲ್ಲೂ ಆನೆಗಳಿಗೆ ಸಮಾಧಿ ನಿರ್ಮಿಸಿರುವುದಂತು ವಿರಳ. ಹೀಗಾಗಿಯೇ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿರುವ ಆನೆಗಳ ಸಮಾಧಿ ಎಲ್ಲರ ಗಮನಸೆಳೆಯುವುದು ಮತ್ತು ಎಲ್ಲರೂ ಅದರತ್ತ ಅಚ್ಚರಿಯ ನೋಟ ಬೀರುವುದು. ಬಳ್ಳೆ ಆನೆ ಶಿಬಿರಕ್ಕೆ ಬಂದವರು ಕೆಲವೊಮ್ಮೆ ಅಡ್ಡಾಡುತ್ತಾ ಕಾಡಿನ ನಡುವೆ ಇರುವ ಸಮಾಧಿಯನ್ನುಕಂಡು ಅಚ್ಚರಿಯ ನೋಟ ಬೀರುತ್ತಾರೆ. ಅಷ್ಟೇ ಅಲ್ಲದೆ ಅದು ಯಾರ ಸಮಾಧಿ? ಏಕೆ ನಿರ್ಮಿಸಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗೆ ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಅಲ್ಲಿರುವ ಮಾವುತರು ಮತ್ತು ಕಾವಾಡಿಗಳು ಹೆಮ್ಮೆಯಿಂದಲೇ ಉತ್ತರ ನೀಡುತ್ತಾರೆ. ಅವರಿಂದ ಎಲ್ಲವನ್ನೂ ಕೇಳಿ ತಿಳಿದುಕೊಂಡ ಬಳಿಕ ಆ ಸಮಾಧಿಗೊಂದು ನಮನ ಸಲ್ಲಿಸದೆ ಯಾರೂ ಕೂಡ ತೆರಳಲಾರರು. ಇಷ್ಟಕ್ಕೂ ಇದ್ಯಾವ ಆನೆಗಳ ಸಮಾಧಿ ಎಂಬ ಕುತೂಹಲ ಈಗಾಗಲೇ ಮೂಡಿರಬಹುದಲ್ಲವೆ? ಅದು ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಹೊತ್ತು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದ ದ್ರೋಣ ಮತ್ತು ರಾಜೇಂದ್ರನ ಸಮಾಧಿಗಳು.

ಬಹಳಷ್ಟು ಜನಕ್ಕೆ ಬಳ್ಳೆ ಆನೆಶಿಬಿರದಲ್ಲಿ ಅಡ್ಡಾಡಿದ್ದರೂ ಈ ಸಮಾಧಿಯ ರಹಸ್ಯ ಗೊತ್ತಿಲ್ಲ. ಆದರೆ ಒಂದಿಷ್ಟು ಮಾಹಿತಿ ಇದ್ದವರು ಇಲ್ಲಿಗೆ ಭೇಟಿ ನೀಡಿದ ಸಂದರ್ಭ ಅದನ್ನು ನೋಡದೆ ಬರಲಾರರು. ಇಷ್ಟಕ್ಕೂ ಈ ಸಮಾಧಿ ಇಂದು ನಿನ್ನೆಯದಲ್ಲ. ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾದ ಸಮಾಧಿಗಳು. ಈ ಸಮಾಧಿಗಳನ್ನು ಇಂದಿಗೂ ಇಲ್ಲಿನ ಮಾವುತ ಕಾವಾಡಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅತ್ತ ಕಡೆ ಹೋದಾಗಲೆಲ್ಲ ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರೆ. ಅಷ್ಟೇ ಅಲ್ಲ ಶಿಬಿರದಲ್ಲಿರುವ ಆನೆಗಳಿಂದ ಆಗಾಗ್ಗೆ ಸಲಾಮ್ ಹೊಡೆಸುತ್ತಾರೆ. ಬಳ್ಳೆ ಆನೆ ಶಿಬಿರದಲ್ಲಿದ್ದ ದ್ರೋಣ ಮತ್ತು ರಾಜೇಂದ್ರ ಇತರೆ ಆನೆಗಳಿಗಿಂತ ವಿಭಿನ್ನವಾಗಿದ್ದವು. ಸಾಧು ಮತ್ತು ದೈತ್ಯ ಬಲ ಹೊಂದಿದ್ದ ಇವು ಮೈಸೂರು ದಸರಾ ಸಂದರ್ಭ ತಮ್ಮದೇ ಆದ ಗತ್ತು ಗೈರತ್ತು, ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನಸೆಳೆಯುತ್ತಿದ್ದವು. ಹೀಗಾಗಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಮಾವುತ, ಕಾವಾಡಿಗಳಿಗೆ ಈ ಆನೆಗಳು ಅಚ್ಚುಮೆಚ್ಚಾಗಿದ್ದವು. ದ್ರೋಣ ಜಂಬೂಸವಾರಿಯಲ್ಲಿ 18ಬಾರಿ ಚಿನ್ನದ ಅಂಬಾರಿ ಹೊತ್ತಿದ್ದರೆ, ರಾಜೇಂದ್ರ ಮೂರು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ದೊರೆತಿಲ್ಲವಾದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದನು. ವಯಸ್ಸಾಗಿದ್ದರಿಂದ ಈತ ಮೃತಪಟ್ಟಿದ್ದನು.

ಇನ್ನು ದ್ರೋಣ ದೃಢಕಾಯನಾಗಿದ್ದನಾದರೂ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನು. ಆತನ ಸಾವು ಎಲ್ಲರಿಗೂ ನೋವು ತರಿಸಿತ್ತು. ಅದರಲ್ಲಿಯೂ ಶಿಬಿರದಲ್ಲಿ ಆತನ ಒಡನಾಟದಲ್ಲಿದ್ದ ಮಾವುತ ಕಾವಾಡಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಆ ದುಃಖ ಮರೆಯಲು ಬಹಳಷ್ಟು ದಿನಗಳೇ ಬೇಕಾಯಿತು.
ಎಲ್ಲರ ಕಣ್ಮಿಣಿಯಾಗಿದ್ದ ಈ ಸಾಕಾನೆಗಳ ನೆನಪಿಗಾಗಿ ಅಂದಿನ ಅರಣ್ಯಾಧಿಕಾರಿಗಳು ಸ್ಪಂದಿಸಿ ಸಮಾಧಿ ನಿರ್ಮಿಸಿದರು. ಆ ಮೂಲಕ ಅವರ ನೆನಪುಗಳು ಚಿರವಾಗಿ ಉಳಿದು ಬಂದಿದೆ. ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುತ್ತದೆ. ಅವತ್ತು ಅರಣ್ಯಧಿಕಾರಿಗಳ ಅನುಮತಿಯೊಂದಿಗೆ  ಸಮಾಧಿಯನ್ನು ಸ್ವಚ್ಚಗೊಳಿಸುವ ಮಾವುತ ಮತ್ತು ಕಾವಾಡಿಗಳು ಬಳಿಕ ಪೂಜೆ ಸಲ್ಲಿಸಿ ನಮಿಸುತ್ತಾರೆ.

ಸಾಮಾನ್ಯವಾಗಿ ಕೇರಳದಿಂದ ಮೈಸೂರಿಗೆ, ಮೈಸೂರಿನಿಂದ ಕೇರಳಕ್ಕೆ ತೆರಳುವ ಪ್ರವಾಸಿಗರು ಬಳ್ಳೆ ಶಿಬಿರಕ್ಕೆ ಆಗಮಿಸಿ ಇಲ್ಲಿರುವ ಆನೆಗಳನ್ನು ನೋಡಿಕೊಂಡು ಹೋಗುತ್ತಾರೆ. ಇವರಿಗೆಲ್ಲ ಇದೀಗ ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನ ಪ್ರಮುಖ ಆಕರ್ಷಣೆ, ಜೊತೆಗೆ ಕುಮಾರ ಸ್ವಾಮಿಯೂ.. ಆದರೆ ಹೆಚ್ಚಿನವರಿಗೆ ದ್ರೋಣ ಮತ್ತು ರಾಜೇಂದ್ರ ಕಾಡಿನಲ್ಲಿ ನೆನಪಾಗಿ ಉಳಿದಿರುವುದು ಗೊತ್ತೇ ಆಗುವುದಿಲ್ಲ.

More Images