ಕೊಡಗಿನ ಮಳೆಯೂ.. ಭತ್ತದ ಕೃಷಿಯೂ..

ಕೊಡಗಿನ ಮಳೆಯೂ.. ಭತ್ತದ ಕೃಷಿಯೂ..

LK   ¦    Jun 16, 2017 03:47:06 PM (IST)

ಮಡಿಕೇರಿ: ಮೋಡ ಕವಿದ ವಾತಾವರಣ..  ಒಮ್ಮೆ ಜೋರಾಗಿ ರಭಸದಿಂದಲೂ.. ಮಗದೊಮ್ಮೆ ಜಿಟಿ ಜಿಟಿಯಾಗಿ ಸುರಿಯುವ ಮಳೆ.. ಇದು ಕೊಡಗಿನ ಮಳೆಗಾಲದ ದೃಶ್ಯ ವೈಭವ. ಬೇಸಿಗೆಯ ದಿನಗಳಲ್ಲಿ, ಹಾಕಿ, ಕ್ರಿಕೆಟ್, ಫುಟ್ಭಾಲ್, ಕಬಡ್ಡಿ ಎನ್ನುತ್ತಾ ಮೈದಾನಗಳಲ್ಲೇ ಹೆಚ್ಚಿನ ಕಾಲವನ್ನು ಕಳೆದ ಇಲ್ಲಿಯ ಜನ ಮಳೆ ಆರಂಭವಾಗುತ್ತಿದ್ದಂತೆಯೇ ತೋಟ, ಗದ್ದೆ ಕೆಲಸಗಳಲ್ಲಿ ನಿರತರಾಗಿ ಬಿಡುತ್ತಾರೆ.

ಕಾಫಿ ತೋಟದಲ್ಲಿ ಗೊಬ್ಬರ ಹಾಕುವುದು, ಚಿಗುರು ತೆಗೆಯುವುದು, ಗದ್ದೆಯಲ್ಲಿ ಉಳುವೆ, ಸಸಿಮಡಿ ತಯಾರಿಕೆ, ನಾಟಿ, ಹೀಗೆ  ಕೃಷಿ ಚಟುವಟಿಕೆಯಲ್ಲಿ ನಿರತರಾದ ದೃಶ್ಯ ಕಂಡು ಬರುತ್ತದೆ. ಸುರಿಯುವ ಮಳೆಯಲ್ಲೇ ಇಲ್ಲಿ ಕೆಲಸ ಕಾರ್ಯಗಳು ಯಾವುದೇ ಅಡೆ ತಡೆಯಿಲ್ಲದೆ ಸಾಗುತ್ತದೆ. ಆಹಾರ ಬೆಳೆಯಾಗಿ ಭತ್ತವನ್ನು ಬೆಳೆಯಲಾಗುತ್ತಿದೆ. ಮೊದಲಿನ ಕಾಲದಲ್ಲಿ ಅತಿ ಹೆಚ್ಚು ಭತ್ತದ ಗದ್ದೆ ಹೊಂದಿದವರನ್ನು ಶ್ರೀಮಂತರೆಂದು ಭಾವಿಸಲಾಗುತ್ತಿತ್ತು. ಅಷ್ಟೇ ಅಲ್ಲ ವಾಣಿಜ್ಯ ಬೆಳೆಗಳ ಭರಾಟೆಯಿಲ್ಲದ ಕಾಲದಲ್ಲಿ ಭತ್ತವೇ ಪ್ರಧಾನ ಬೆಳೆಯಾಗಿತ್ತು. ಯಂತ್ರಗಳು ಗದ್ದೆಗೆ ಇಳಿದಿರಲಿಲ್ಲ. ಎತ್ತು, ಕೋಣಗಳನ್ನೇ ಬಳಸಿ ಉಳುಮೆ ಮಾಡಲಾಗುತ್ತಿತ್ತು. ದೊಡ್ಡ ದೊಡ್ಡ ಗದ್ದೆಗಳಿರುವುದರಿಂದ ನಾಲ್ಕೈದು ಜೋಡಿಯ ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತು. ಆದರೆ ಇವತ್ತು ದನ ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಉಳುಮೆಗೆ ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಬಳಸಲಾಗುತ್ತಿದೆ. ಕೆಲವರು ಮಾತ್ರ ದನಗಳಿಂದ ಉಳುಮೆ ಮಾಡುತ್ತಿದ್ದಾರೆ.


ಕೊಡಗಿನಲ್ಲಿ ಉಳುಮೆಯಲ್ಲೂ ವಿಶಿಷ್ಟತೆಯನ್ನು ನಾವು ಕಾಣಬಹುದಾಗಿದೆ. ಇಲ್ಲಿ ಪ್ರತಿ ಸೋಮವಾರ ಉಳುಮೆಗೆ ರಜೆ. ಎತ್ತುಗಳನ್ನು ಹಗಲಿಡೀ ಉಳುಮೆಗೆ ಬಳಸುವುದಿಲ್ಲ. ಜಿಟಿಜಿಟಿ ಮಳೆಯಿರಲಿ, ಜಡಿ ಮಳೆಯಿರಲಿ ಬೆಳಿಗ್ಗೆ 5 ಗಂಟೆಗೆ ಎದ್ದು ದನಗಳೊಂದಿಗೆ ಗದ್ದೆಗೆ ಹೋಗಿ ಉಳುಮೆ ಶುರು ಮಾಡಿ 11 ಗಂಟೆಗೆಲ್ಲ ನಿಲ್ಲಿಸಿ ಬಿಡುತ್ತಾರೆ. ಇನ್ನು ಭತ್ತದ ಸಸಿ ಮಡಿ ತಯಾರಿಸಿ ಪೈರು ಕೀಳುವ ಕಾರ್ಯವನ್ನು ಮಹಿಳೆಯರು ಮಾಡಿದರೆ ಪುರುಷರು ನಾಟಿ ಕಾರ್ಯ ಮಾಡುತ್ತಾರೆ. ಇಲ್ಲಿ ನಾಟಿ ಎಂದರೆ ಹಬ್ಬದ ಸಂಭ್ರಮ. ಹೆಚ್ಚಿನವರು ತಮ್ಮ ಕುಟುಂಬದಲ್ಲಿ ಕೂಡು ಆಳುಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಒಬ್ಬರು ಮತ್ತೊಬ್ಬರ ಕೆಲಸದಲ್ಲಿ ಭಾಗಿಯಾಗಿ ನಾಟಿ ಕಾರ್ಯವನ್ನು ಮುಗಿಸುತ್ತಾರೆ. ನಾಟಿಕಾರ್ಯದ ಕೊನೆಯ ನಾಟಿಯನ್ನು ದೊಡ್ಡ ನಾಟಿ  ಎಂದು ಕರೆಯಲಾಗುತ್ತದೆ. ಅಂದು ನಾಟಿ ಕಾರ್ಯದಲ್ಲಿ ನಿರತರಾದವರಿಗೆ ಬಾಡೂಟ ಏರ್ಪಡಿಸಲಾಗುತ್ತದೆ. ಜತೆಗೆ ಚಳಿಗೆ ಬಿಸಿಯಾಗಲು ಒಂದಷ್ಟು ಮದ್ಯವೂ ಇರುತ್ತದೆ. ಕೆಲವು ಕುಟುಂಬಗಳಲ್ಲಿ ತಲತಲಾಂತರದಿಂದ  ನಾಟಿ ಓಟವನ್ನು ನಡೆಸಿಕೊಂಡು ಬಂದಿರುವುದರಿಂದ ಅಲ್ಲಿ ನಾಟಿಯಾದ ಬಳಿಕ ಅದೇ ಗದ್ದೆಯಲ್ಲಿ ಓಟವನ್ನು ನಡೆಸಲಾಗುತ್ತದೆ. ಇದರಲ್ಲಿ ಓಡಿ ಗುರಿ ಮುಟ್ಟಿದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ಎಲೆಅಡಿಕೆ ನೀಡಿ ಪ್ರೋತ್ಸಾಹಿಸುವುದು ಹಿಂದಿನಿಂದಲೂ ನಡೆದು ಬಂದಿದ್ದು, ಈಗಲೂ ಸಾಂಪ್ರದಾಯಿಕವಾಗಿ ನಡೆಯುತ್ತಲೇ ಇದೆ.

ಕೊಡಗಿನಲ್ಲಿ ಕಾವೇರಿ ಹುಟ್ಟಿ ಹರಿದರೂ ಇದರಿಂದ ಭತ್ತದ ಕೃಷಿ ಮಾಡುವುದು ಅಪರೂಪ. ಮಳೆ ಬಂದರೆ ಮಾತ್ರ ಭತ್ತ ಬೆಳೆಯಲು ಸಾಧ್ಯ. ಮಳೆ ಬಂದು ಭೂಮಿ ತೇವಗೊಂಡು ಅಂತರ್ಜಲ ಹೆಚ್ಚಾಗಿ ಬೆಟ್ಟ ಗುಡ್ಡಗಳಲ್ಲಿ ಜಲ ಹುಟ್ಟಿ ಹರಿಯುತ್ತದೆ. ಅದೇ ನೀರನ್ನು ಬಳಸಿ ಕೃಷಿಕಾರ್ಯ ಮಾಡುತ್ತಾರೆ. ಈ ನೀರು ಮಳೆಗಾಲದಲ್ಲಿ ಅಧಿಕ ಪ್ರಮಾಣದಲ್ಲಿ ಹರಿಯುತ್ತದೆಯಾದರೂ ಮೂರ್ನಾಲ್ಕು ತಿಂಗಳಲ್ಲಿ ಬತ್ತಿ ಹೋಗುತ್ತದೆ. ಅಷ್ಟರಲ್ಲಿ ಭತ್ತವೂ ಫಸಲಿಗೆ ಬರುತ್ತದೆ.

ಇತ್ತೀಚೆಗೆ ಆಧುನಿಕ ತಳಿಗಳು ಲಗ್ಗೆಯಿಟ್ಟಿವೆಯಾದರೂ ಹಿಂದಿನಿಂದಲೂ ಕೊಡಗಿನವರೇ ಕಂಡು ಹಿಡಿದ ಬಿಕೆಬಿ, ಬಿಳಿಯ, ಬಿಎಂ3 ಮೊದಲಾದವು ಈಗಲೂ ಇವೆ. ಇವು ಇತರೆ ಬೆಳೆಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆದು ಹೆಚ್ಚಿನ ಹುಲ್ಲನ್ನು ನೀಡುತ್ತವೆ. ಅಷ್ಟೇ ಅಲ್ಲದೆ ಗಾಳಿ, ಮಳೆಗೆ ಕೊಳೆಯದೆ ಎಂತಹ ಪರಿಸ್ಥಿತಿಯಲ್ಲೂ ಹೊಂದಿ ಕೊಂಡು ಬೆಳೆಯುತ್ತವೆ. ಇನ್ನು ಗದ್ದೆ ಬಯಲಲ್ಲಿ ಕೆಲಸ ಮಾಡುವಾಗ ಮಳೆಯಿಂದ ನೆನೆಯದಂತೆ ಈಗ ಪ್ಲಾಸಿಕ್ ಗಳನ್ನು ಹಾಕಿಕೊಂಡರೆ ಮೊದಲೆಲ್ಲ ತಾವೇ ವಾಟೆ(ಬಿದಿರಿನಂತಹ ಸಸ್ಯ)ಯಿಂದ ತಯಾರಿಸಿದ ಕೊರಂಬನ್ನು ಬಳಸುತ್ತಿದ್ದರು. ಈಗಲೂ ಗ್ರಾಮೀಣ ಪ್ರದೇಶದ ಬಹಳಷ್ಟು ಮಂದಿ ಕೆಲಸ ಕಾರ್ಯಗಳಿಗೆ ಕೊರಂಬನ್ನು ಬಳಸುವುದು ನೋಡಲು ಸಿಗುತ್ತದೆ. ಮಳೆಗಾಲದಲ್ಲಿ ನಾಟಿ ಮಾಡಿ ಅದು ಮುಗಿಸಿದ ಖುಷಿಯಲ್ಲಿ ಕೈಲ್ ಮೂಹೂರ್ತ ಹಬ್ಬವನ್ನು, ಬೆಳೆ ತೆನೆ ಒಡೆಯುವಾಗ ತುಲಾಸಂಕ್ರಮಣ, ಕೊಯ್ಲುಗೆ ಬಂದಾಗ ಹುತ್ತರಿ ಹೀಗೆ ಇಲ್ಲಿ ಆಚರಿಸುವ ಹಬ್ಬವೂ ಭತ್ತದ ಕೃಷಿ ಕುರಿತಾಗಿಯೇ ಇರುವುದನ್ನು ಕಾಣಬಹುದು. ಒಟ್ಟಾರೆ ಕೊಡಗಿನ ಮಳೆ ಎಂದರೆ ಬರೀ ಮಳೆ ಅಲ್ಲ ಅದು ನೂರಾರು ಅನುಭವ ನೀಡುವ, ನೆನಪುಗಳನ್ನು ಹೊತ್ತು ತರುವ ದೃಶ್ಯ ಕಾವ್ಯ.

More Images