ಶೂಟಿಂಗ್ ಸ್ಪಾಟ್‍ನಲ್ಲೊಂದು ಕನಕ ದೇಗುಲ!

ಶೂಟಿಂಗ್ ಸ್ಪಾಟ್‍ನಲ್ಲೊಂದು ಕನಕ ದೇಗುಲ!

B.M.LavaKumar   ¦    Nov 24, 2018 04:42:16 PM (IST)
ಶೂಟಿಂಗ್ ಸ್ಪಾಟ್‍ನಲ್ಲೊಂದು ಕನಕ ದೇಗುಲ!

ಕನಕದಾಸರಿಗೆ ಕೃಷ್ಣ ಗೋಡೆಯೊಡೆದು ದರ್ಶನ ನೀಡಿದ ಉಡುಪಿ ಕೃಷ್ಣ ದೇಗುಲದ ಕನಕ ಕಿಂಡಿಯ ಕಥೆ ಜನಜನಿತ. ಇಂತಹ ಕನಕದಾಸರಿಗೆ ಮೈಸೂರು ಜಿಲ್ಲೆಯಲ್ಲೊಂದು ದೇಗುಲವಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಹಾಗೆ ನೋಡಿದರೆ ಕನಕದಾಸರಿಗೆ ಈ ದೇಗುಲವನ್ನು ಕುರುಬ ಸಮಾಜದವರು ನಿರ್ಮಿಸಿದ್ದಲ್ಲ. ಈ ದೇಗುಲವನ್ನು ನಿರ್ಮಿಸಿದ್ದು ಗಂಗಮತಸ್ಥರು ಎನ್ನುವುದು ಈ ದೇಗುಲದ ಮತ್ತೊಂದು ವಿಶೇಷತೆ.

ದಾಸರ ಪೈಕಿ ಒಬ್ಬರದಾದ ಕನಕದಾಸರು ಎಲ್ಲೆಡೆ ಸಂಚಾರ ಮಾಡುತ್ತಾ ಸಮಾಜದ ಅಂಕುಡೊಂಕನ್ನು ತಿದ್ದುವ ಮೂಲಕ ಸಮಾಜಕ್ಕೆ ಶ್ರೇಷ್ಠ ಸಂದೇಶ ನೀಡಿದ್ದಾರೆ. ಇಂತಹ ಮಹಾಪುರುಷ ಮೈಸೂರಿನಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ಮಹದೇವಪುರಕ್ಕೆ ಬಂದಿದ್ದರಂತೆ. ಅಷ್ಟೇ ಅಲ್ಲ ಅವತ್ತು ಅಲ್ಲೊಂದು ಪವಾಡ ನಡೆಯಿತಂತೆ. ಆ ಕಥೆ ಇವತ್ತಿಗೂ ಇಲ್ಲಿನ ಜನರ ಬಾಯಲ್ಲಿ ಕೇಳಿ ಬರುತ್ತದೆ. ಅಂದು ನಡೆದಿತ್ತು ಎನ್ನಲಾದ ಘಟನೆ ಇಂದು ದೇಗುಲ ನಿರ್ಮಾಣಕ್ಕೆ ಕಾರಣವಾಗಿದೆ ಎನ್ನಬಹುದು.

ಕನಕ ದೇಗುಲ ನಿರ್ಮಾಣಗೊಂಡಿರುವ ಮಹದೇವಪುರ ನಿಸರ್ಗ ಸಿರಿಯ ಸುಂದರ ತಾಣ. ಈ ಊರನ್ನು ಶೂಟಿಂಗ್ ಸ್ಪಾಟ್ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ನೂರಾರು ಸಿನಿಮಾಗಳ ಚಿತ್ರೀಕರಣವಾಗಿದೆ, ಚಿತ್ರೀಕರಣವಾಗುತ್ತಲೇ ಇರುತ್ತದೆ. ಇಂತಹ ಸ್ಥಳದಲ್ಲಿರುವ ಪುಟ್ಟ ಕನಕ ದೇಗುಲ ಜನರ ನಂಬಿಕೆಗೆ ಸಾಕ್ಷಿಯಾಗಿದೆ. ಕಾಗಿನೆಲೆ ಹೊರತುಪಡಿಸಿದರೆ ನಿತ್ಯವೂ ಪೂಜೆಯಾಗುವ ಕನಕದಾಸ ಪುಟ್ಟ ದೇವಾಲಯವಿದು. ಇನ್ನೊಂದು ಅಚ್ಚರಿಯ ಅಂಶ ಎಂದರೆ ಕನಕದಾಸರನ್ನು ಇಲ್ಲಿ ಪೂಜೆ ಮಾಡುವುದು ಗಂಗಮತಸ್ಥರು. ಅಂದರೆ ನಾಯಕ ಸಮುದಾಯದವರು. ಇಲ್ಲಿ ಯಾವ ಕುರುಬ ಸಮುದಾಯದವರೂ ಇಲ್ಲ. ಆದರೂ ಇಲ್ಲಿ ಅವರೇ ಆರಾಧ್ಯದೈವ. ಇದರ ಹಿಂದೆ ರೋಚಕ ಕಥೆಗಳಿವೆ. ಉಡುಪಿಯಲ್ಲಿ ಶ್ರೀಕೃಷ್ಣನ ದೇವಾಲಯದಲ್ಲಿರುವ ಕನಕನ ಕಿಂಡಿಯಂತೆಯೇ ಇಲ್ಲಿ ಕನಕ ಬಂಡೆಯಿದೆ.

ಬಹುಶಃ ಉಡುಪಿಯ ಶ್ರೀ ಕೃಷ್ಣನ ದರ್ಶನದ ನಂತರ ಕನಕದಾಸರು ದೇಶ ಪರ್ಯಟನೆ ಹೊರಟು ತಮ್ಮ ಗುರುಗಳಾದ ಸೋಸಲೆ ವ್ಯಾಸರಾಜರ ಮೂಲಸ್ಥಳ ಸೋಸಲೆಗೆ ಹೊರಟಾಗ ಮಾರ್ಗ ಮಧ್ಯದಲ್ಲಿ ಶ್ರೀರಂಗಪಟ್ಟಣದ ಶ್ರೀ ರಂಗನಾಥನ ದರುಶನ ಮಾಡಲು ಮಹದೇವಪುರದ ಕಾವೇರಿ ನದಿ ದಾಟಲು ಕನಕದಾಸರು ಇಲ್ಲಿ ಬಂದ್ದಿದ್ದರು ಎಂದು ನಂಬುತ್ತಾರೆ ಇಲ್ಲಿನ ಗಂಗಮತಸ್ಥರು.

ಜನವಲಯದಲ್ಲಿರುವ ಕಥೆಯ ಪ್ರಕಾರ ಕೊಳಕಾಗಿದ್ದ ನಡೆದು ಗಾಯಗೊಂಡಿದ್ದ ಕನಕದಾಸರು ಇಲ್ಲಿ ನದಿ ದಾಟಲು ತೆಪ್ಪ ನಡೆಸುವವರ ಸಹಕಾರ ಕೇಳುತ್ತಾರೆ. ಆದರೆ ಆಗ ಹರಿಗೋಲು ಹುಟ್ಟುಹಾಕುತ್ತಿದ್ದ ಗಂಗಮತಸ್ಥರು ದಾಸರನ್ನು ಕರೆದುಕೊಳ್ಳಲು ಮುಂದಾಗುತ್ತಾರೆ. ಆಗ ಹರಿಗೋಲಿನಲ್ಲಿದ್ದ ಕೆಲವು ಬ್ರಾಹ್ಮಣರು ಈ ಶೂದ್ರನನ್ನು ಹತ್ತಿಸಿಕೊಳ್ಳಬೇಡ ಎಂದು ಅವಮಾನ ಮಾಡುತ್ತಾರೆ. ಕೊನೆಗೆ ವಿಧಿಯಿಲ್ಲದೇ ಗಂಗಮತಸ್ಥರು ಕನಕದಾಸರನ್ನು ಬಿಟ್ಟು ಹುಟ್ಟುಹಾಕುತ್ತಾರೆ. ಆಗ ಕನಕದಾಸರು ಅಲ್ಲಿಯೇ ಒಂದು ಪವಾಡ ತೋರುತ್ತಾರೆ. ಪಕ್ಕದಲ್ಲೇ ಇರುವ ತೋಟದವರಿಂದ ಬಾಳೆ ಎಲೆ ಕೇಳುತ್ತಾರೆ. ಆದರೆ ಅಲ್ಲಿದ್ದವರು ಕೊಡಲು ನಿರಾಕರಿಸುತ್ತಾರೆ. ಆದರೆ ಪುಣ್ಯಾತ್ಮನೊಬ್ಬ ಅದೇನು ಮಾಡುತ್ತಾರೆ ನೋಡೋಣ ಎಂಬ ಕುತೂಹಲದಿಂದ ಬಾಳೆಲೆ ಕೊಡುತ್ತಾರೆ. ಅದೇ ಎಲೆಯನ್ನೇ ದೋಣಿಯಂತೆ ಬಳಸಿ ಕನಕದಾಸರು ಹರಿಗೋಲಿನಲ್ಲಿ ಹೋಗುತ್ತಿದ್ದವರನ್ನು ದಾಟಿ ಒಂದು ಬಂಡೆ ಮೇಲೆ ಹತ್ತಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ನಂತರ ತಮ್ಮ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದು ನೀರಿನಲ್ಲಿ ತೊಳೆದು ಸ್ವಚ್ಚ ಮಾಡಿ ಮತ್ತೆ ತಮ್ಮ ಹೊಟ್ಟೆಯಲ್ಲಿ ಹಾಕಿಕೊಂಡು ಬ್ರಾಹ್ಮಣರನ್ನು ಕೇಳುತ್ತಾರೆ. ನಾನು ಈಗ ಪರಿಶುದ್ಧನೇ ಎಂದು. ಈ ಪವಾಡದಿಂದ ಬೇಸ್ತುಬಿದ್ದ ಅವರು ಕ್ಷಮೆಯಾಚಿಸಿದರೆ, ಅಲ್ಲಿದ್ದ ಗಂಗಮತಸ್ಥರು ಅಂದಿನಿಂದಲೂ ಕನಕದಾಸರನ್ನೇ ಪೂಜಿಸುತ್ತಾ ಬಂದಿದ್ದಾರೆ. ಕನಕದಾಸರು ಕುಳಿತ್ತಿದ್ದ ಬಂಡೆಗೆ ಕನಕ ಬಂಡೆಯೆಂದೇ ಹೆಸರು.ಆ ಬಂಡೆಯ ಮೇಲೆ ಕನಕದಾಸರ ಮಂಡಿಯೂರಿದ್ದ ಗುರುತು ಇದೆ ಎಂದು ಊರಿನ ಜನ ತೋರಿಸುತ್ತಾರೆ.

ಮಹದೇವಪುರದಲ್ಲಿ ನಂಜುಂಡಯ್ಯ ಎಂಬುವರು ಕಾಲದಲ್ಲಿ ಅಂದರೆ 2003ರಲ್ಲಿ ಕನಕ ದೇವಾಲಯವನ್ನು ಕೊಡಗನಹಳ್ಳಿ ರಾಮೇಗೌಡ ಮತ್ತ ಜೆ.ಸಿ.ದರ್ಶನ್ ಅವರ ನೇತೃತ್ವದಲಿ ನಿರ್ಮಿಸಲಾಯಿತು. ಅಲ್ಲಿ ತನಕ ಕೇವಲ ಬಂಡೆಗೆ ಮಾತ್ರ ಪೂಜೆಸುತ್ತಿದ್ದವರು ಕನಕ ಮೂರ್ತಿಯನ್ನು ಪೂಜಿಸಲಾರಂಭಿಸಿದರು. ಅಂದಿನಿಂದ ಇಂದಿಗೂ ಗಂಗ ಮತಸ್ಥರೇ ಇಲ್ಲಿ ಕನಕದಾಸರ ಆರಾಧನೆ ಮಾಡುತ್ತಾರೆ. ಈಗ ದಾಸಯ್ಯ ಎಂಬುವರನ್ನು ನೇಮಿಸಿಕೊಂಡು ನಿರಂತರವಾಗಿ ಪೂಜೆ ಅರ್ಚನೆ ಮಾಡಿಕೊಂಡು ಬರಲಾಗುತ್ತಿದೆ.

More Images