ಬೆಟ್ಟಶ್ರೇಣಿಗಳ ನಡುವೆ ಕಂಗೋಳಿಸುತ್ತಿರುವ ನಾಲ್ಕುನಾಡು ಅರಮನೆ

ಬೆಟ್ಟಶ್ರೇಣಿಗಳ ನಡುವೆ ಕಂಗೋಳಿಸುತ್ತಿರುವ ನಾಲ್ಕುನಾಡು ಅರಮನೆ

Lavakumar   ¦    Feb 03, 2018 12:40:32 PM (IST)
ಬೆಟ್ಟಶ್ರೇಣಿಗಳ ನಡುವೆ ಕಂಗೋಳಿಸುತ್ತಿರುವ ನಾಲ್ಕುನಾಡು ಅರಮನೆ

ಅರಮನೆ ಪಟ್ಟಣಗಳ ನಡುವೆ ಇರುವುದು ಸಾಮಾನ್ಯ ಆದರೆ ಕೊಡಗಿನಲ್ಲೊಂದು ರಾಜರ ಕಾಲದ ಅರಮನೆ ಕಾನನದ ನಡುವೆ ಇರುವುದು ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ.

ಮೇಲ್ನೋಟಕ್ಕೆ ಇದೊಂದು ಪುಟ್ಟ ಅರಮನೆಯಾದರೂ ತನ್ನದೇ ಆದ ಸೌಂದರ್ಯ ಮತ್ತು ಇತಿಹಾಸ ಹೊಂದಿರುವುದನ್ನು ಕಾಣಬಹುದು.

ಈ ಅರಮನೆಯನ್ನು ಕೊಡಗಿನಲ್ಲಿ ನಾಲ್ಕು ನಾಡು ಅರಮನೆ ಎಂದೇ ಕರೆಯಲಾಗುತ್ತಿದೆ. ಹಿಂದಿನ ಕಾಲದಲ್ಲಿ ಬೆಟ್ಟ ಮತ್ತು ಕಾನನ ನಡುವೆ ಸುರಕ್ಷಿತ ಸ್ಥಳವನ್ನು ಅರಸಿ ಶತ್ರುಗಳಿಂದ ಪಾರಾಗಲು ಕಟ್ಟಿದ ಅರಮನೆ ಇದಾಗಿದೆ.

ಅತ್ಯಂತ ಎತ್ತರದ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಶ್ರೇಣಿಗಳ ನಡುವೆ ಯುವಕಪಾಡಿ ಗ್ರಾಮದ ಎತ್ತರವಾದ ಗುಡ್ಡದ ಮೇಲೆ ಅರಮನೆಯು ನಿರ್ಮಾಣವಾಗಿದೆ. ಇನ್ನು ನಾವು ಈ ಅರಮನೆಯ ನಿರ್ಮಾಣದ ಕುರಿತಂತೆ ತಿಳಿಯಿತ್ತಾ ಹೋದರೆ ಒಂದಷ್ಟು ಮಾಹಿತಿಗಳು ಸಿಗುತ್ತವೆ.

ಕೊಡಗನ್ನು ಆಳುತ್ತಿದ್ದ ಅರಸರ ಮನೆತನದವನಾದ ದೊಡ್ಡ ವೀರರಾಜೇಂದ್ರನನ್ನು ಸೆರೆಹಿಡಿದ ಟಿಪ್ಪುಸುಲ್ತಾನ್ ಪಿರಿಯಾಪಟ್ಟಣದ ಕೋಟೆಯಲ್ಲಿ ಬಂಧಿಸಿಟ್ಟನು. ಆದರೆ 1791-92ರಲ್ಲಿ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಟಿಪ್ಪುಸುಲ್ತಾನನ ಸೆರೆಯಿಂದ ಕುಟುಂಬ ಸಮೇತ ತಪ್ಪಿಸಿಕೊಂಡ ದೊಡ್ಡವೀರರಾಜೇಂದ್ರನು ಕುರ್ಚಿ ಎಂಬ ಗ್ರಾಮಕ್ಕೆ ಬಂದರಾದರೂ ಆ ವೇಳೆಗೆ ಅಲ್ಲಿದ್ದ ಅರಮನೆ ನಾಶವಾಗಿದ್ದರಿಂದ ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ತಡಿಯಂಡಮೋಳ್ ಶ್ರೇಣಿಯ ಸಮತಟ್ಟು ಜಾಗದಲ್ಲಿ ಅರಮನೆಯನ್ನು ಕಟ್ಟಿಸಿದರು.

ದೊಡ್ಡ ವೀರರಾಜೇಂದ್ರನಿಂದ ನಿರ್ಮಿಸಲ್ಪಟ್ಟ ಈ ಅರಮನೆಯು ಮೊದಲು ಹುಲ್ಲಿನ ಹೊದಿಕೆಯನ್ನು ಹೊಂದಿತ್ತು. ಆ ನಂತರ ಬ್ರಿಟೀಷರ ಕಾಲದಲ್ಲಿ ಅದಕ್ಕೆ ಹೆಂಚಿನ ಹೊದಿಕೆಯನ್ನು ಹಾಕಲಾಯಿತು.

ಎರಡು ಪ್ರವೇಶದ್ವಾರವಿರುವ ಈ ಅರಮನೆಯು ಎರಡು ಅಂತಸ್ತುಗಳನ್ನು ಹೊಂದಿದ್ದು, ಮೇಲಿನ ಅಂತಸ್ತಿನಲ್ಲಿ ಸುಂದರ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಚಿಕ್ಕ ಹಾಗೂ ಚೊಕ್ಕದಾದ ವಿನ್ಯಾಸಗಳಿಂದ ಕೂಡಿದ ಹಲವು ಕೋಣೆಗಳಿವೆ. ಸುಂದರ ವರ್ಣ ಲೇಪನವನ್ನು ಹೊಂದಿರುವ ಛಾವಣಿ ಕೂಡ ಮರದಿಂದಲೇ ನಿರ್ಮಾಣವಾಗಿದೆ. ಇನ್ನು ಸುತ್ತಲಿನ ಗೋಡೆಗಳು ಆಕರ್ಷಕವಾಗಿದ್ದು ವೀಕ್ಷಕರ ಮನಸೆಳೆಯುತ್ತವೆ.

ಅರಮನೆಯಲ್ಲಿ ಸುಮಾರು 14ಚಿಕ್ಕ ಕೋಣೆಗಳು ಹಾಗೂ ಹಿಂಭಾಗದಲ್ಲಿ ನಾಲ್ಕು ಕತ್ತಲೆ ಕೋಣೆಗಳನ್ನು ಕಾಣಬಹುದು. ರಾಜರ ಕಾಲದಲ್ಲಿ ತಪ್ಪಿತಸ್ಥರನ್ನು ಈ ಕೋಣೆಯಲ್ಲಿ ಬಂಧಿಸಿಡುತ್ತಿದ್ದರಂತೆ.

ಛಾವಣಿಯು ಷಟ್ಕೋನಾಕಾರದಲ್ಲಿದ್ದು, ಹನ್ನೆರಡು ಬೃಹತ್ ಕಂಬಗಳ ಮೇಲೆ ನಿಂತಿದೆ. ಉಬ್ಬು ಶಿಲ್ಪಗಳು ಕಂಬದ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಕಿಟಿಕಿ ಹಾಗೂ ಬಾಗಿಲುಗಳು ವಿಶಿಷ್ಟ ಕೆತ್ತನೆಗಳಿಂದ ಕೂಡಿದ್ದು, ಆ ಕಾಲದ ಕಲಾ ನೈಪುಣ್ಯತೆಗೆ ಹಿಡಿದ ಕೈಕನ್ನಡಿಯಾಗಿದೆ.

ಅರಮನೆಯ ಮೊದಲ ಹಜಾರದಲ್ಲಿ ಕಾಣ ಸಿಗುವ ಕಲಾ ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ ವೈಭವಗಳನ್ನು ಸಾರುವ ಚಿತ್ರಗಳು ಅಲ್ಲಿವೆ. ಅಂಬಾರಿಯಲ್ಲಿ ಕುಳಿತ ರಾಜ. ಆತನ ಹಿಂದೆ ಹಾಗೂ ಮುಂದೆ ವಾದ್ಯವೃಂದದೊಂದಿಗೆ ಸಾಗುವ ಸೈನ್ಯದ ದೃಶ್ಯಗಳು ಕಂಡು ಬರುತ್ತವೆ. ಸಂಪೂರ್ಣ ಮರದಿಂದಲೇ ನಿರ್ಮಾಣವಾಗಿರುವುದು ಈ ಅರಮನೆಯ ವಿಶೇಷತೆಯಾಗಿದೆ.

ಇನ್ನು ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಕಿರುಮಂಟಪವಿದ್ದು, ಇದಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ. ಮಂಟಪದ ಮೇಲ್ಭಾಗದಲ್ಲಿ ನಾಲ್ಕು ದಿಕ್ಕಿಗೂ ಮಲಗಿರುವ ಬಸವನ ಮೂರ್ತಿಯಿದೆ. ಇನ್ನು ಈ ಕಿರುಮಂಟಪವನ್ನು ವಿವಾಹಮಂಟಪ ಎಂದು ಕೂಡ ಕರೆಯಲಾಗುತ್ತದೆ. ಈ ಮಂಟಪದಲ್ಲಿ 1796ರ ಮಾಘ ಶುದ್ಧ ಭಾನುವಾರ ರಾತ್ರಿ 19ಗಳಿಗೆ ವೃಶ್ಚಿಕ ಲಗ್ನದಲ್ಲಿ ರಾಜಪುರೋಹಿತ ಶಿವಲಿಂಗಸ್ವಾಮಿ ಅವರ ಸಮ್ಮುಖದಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹ ನಡೆದಿತ್ತು ಎಂದು ಹೇಳಲಾಗಿದೆ.

ಈಗ ದೂರದಿಂದ ಬರುವ ಪ್ರವಾಸಿಗರು ವಾಸ್ತವ್ಯ ಹೂಡಲೆಂದೇ ಸುತ್ತ ಮುತ್ತ ಹಲವು ಹೋಂ ಸ್ಟೇಗಳಾಗಿವೆ. ಇಲ್ಲಿಗೆ ಪ್ರವಾಸಿಗರು ಮಡಿಕೇರಿಯಿಂದ ನಾಪೋಕ್ಲು- ಕಕ್ಕಬ್ಬೆ ಮೂಲಕ ತೆರಳಬಹುದಾಗಿದೆ

More Images