ಕೊರೋನಾದಿಂದ ರೈತರು ಅತಂತ್ರ: ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ

ಕೊರೋನಾದಿಂದ ರೈತರು ಅತಂತ್ರ: ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ

LK   ¦    Mar 18, 2020 04:39:18 PM (IST)
ಕೊರೋನಾದಿಂದ ರೈತರು ಅತಂತ್ರ: ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ

ಮೈಸೂರು: ದೇಶಾದ್ಯಂತ ಕೊರೋನಾ ವೈರಸ್ ಪ್ರಭಾವದಿಂದ ಕೃಷಿ ಉತ್ಪನ್ನಗಳು, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಇಳಿಮುಖವಾಗಿ ಮಾರುಕಟ್ಟೆಯಲ್ಲಿ ಖರೀದಿದಾರರು ಕಡಿಮೆಯಾಗಿ ಬೇಡಿಕೆ ಕುಸಿಯುತ್ತಿರುವುದರಿಂದ ರೈತರ ಬದುಕು ಅತಂತ್ರವಾಗಿದ್ದು ಸರ್ಕಾರ ರೈತರ ಬೆಂಬಲಕ್ಕೆ ಬರಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧಕ್ಷ ಕುರುಬೂರ್ ಶಾಂತಕುಮಾರ್ ಆಗ್ರಹಿಸಿದ್ದಾರೆ.

ಕುಕ್ಕುಟ ಉದ್ಯಮದ ಕೋಳಿ ಸಾಕಾಣಿಕೆದಾರರು ಖರೀದಿ ನಿಲ್ಲಿಸಿರುವ ಕಾರಣ ಮೆಕ್ಕೆಜೋಳ ಬೆಳೆದ ರೈತರನ್ನು ಕೇಳುವವರೆ ಇಲ್ಲದಂತಾಗಿದ್ದು, ಕ್ವಿಂಟಾಲ್‍ಗೆ 2200ರೂ. ಬೆಲೆಯಿದ್ದ ಮೆಕ್ಕೆ ಜೋಳದ ಬೆಲೆ 1 ಸಾವಿರ ರೂ.ಗಳಿಗೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಕ್ವಿಂಟಾಲ್‍ಗೆ 1760ರೂ.ಗೆ ಸರ್ಕಾರ ನಿಗದಿ ಮಾಡಲಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತನ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಿ ಖರೀದಿ ಕೇಂದ್ರ ತೆರೆದು ಸರ್ಕಾರವೇ ಖರೀದಿಸುವ ತುರ್ತು ಕ್ರಮಕ್ಕೆ ಮುಂದಾಗಬೇಕು.

ತರಕಾರಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಿ ಎ.ಪಿ.ಎಂ.ಸಿಗಳ ಮೂಲಕ ಹಾಗೂ ಹಾಪ್‍ಕಾಮ್ಸ್ ಮೂಲಕ ಸರ್ಕಾರ ಖರೀದಿ ಮಾಡುವಂತಹ ಕಾರ್ಯ ಕೈಗೆತ್ತಿಕೊಳ್ಳಬೇಕು. ಹೀಗೆ ಖರೀದಿ ಮಾಡಿದ ತರಕಾರಿಗಳನ್ನು ಜೈಲು, ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಕೇಂದ್ರಗಳು ಮತ್ತಿತರ ಸರ್ಕಾರಿ ಸಂಸ್ಥೆಗಳಿಗೆ ಸರಬರಾಜು ಮಾಡುವಂತಾಗಬೇಕು. ಇದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ರೈತನನ್ನು ಅಪಾಯದಿಂದ ರಕ್ಷಣೆ ಮಾಡಿದಂತಾಗುತ್ತದೆ. ಅನಿವಾರ್ಯವಾದರೆ ರೈತ ಉತ್ಪಾದಕ ಕಂಪನಿಗಳ ಸಹಕಾರದೊಂದಿಗೆ ಈ ಕಾರ್ಯಕ್ಕೆ ಮುಂದಾಗಬೇಕು ಈ ಕಾರ್ಯಕ್ರಮವನ್ನು ಜಾರಿಗೆತರುವ ಎಫ್.ಪಿ.ಸಿ ಗಳಿಗೆ ಬಡ್ಡಿರಹಿತವಾಗಿ ಬ್ಯಾಂಕ್ ಮೂಲಕ ಸಾಲ ಕೊಡಿಸುವ ಯೋಜನೆ ಜಾರಿಯಾಗಿ ಈ ಯೋಜನೆ ಯಶಸ್ವಿಯಾಗಲು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಸರ್ಕಾರ ಈ ಬಗ್ಗೆ ನಿರ್ಲಕ್ಷ ನೀತಿ ಅನುಸರಿಸಿದರೆ ರೈತರ ಸಂಕಷ್ಟದ ಸರಮಾಲೆಯಲ್ಲಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುವ  ಸಂಭವವಿದೆ ಎಂಬುದನ್ನು ತಾವು ಗಂಭೀರವಾಗಿ ಅರಿಯಬೇಕು.

ರಾಜ್ಯಾದ್ಯಂತ ಭತ್ತಖರೀದಿ ಕೇಂದ್ರಗಳನ್ನು ತೆರೆದು ಈ ಖರೀದಿ ಕೇಂದ್ರಗಳ ಮೂಲಕ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಅಂದಾಜು 37 ಸಾವಿರ ಮೆಟ್ರಿಕ್‍ಟನ್ ಭತ್ತವನ್ನು ಸರ್ಕಾರ ಖರೀದಿಸಿರುತ್ತದೆ. ಈ ರೈತರಿಗೆ ಕನಿಷ್ಟ ಬೆಂಬಲ ಬೆಲೆಯಂತೆ ಕ್ವಿಂಟಾಲ್‍ಗೆ 1835 ರೂ. ಹಾಗೂ ಹೆಚ್ಚುವರಿ ಪ್ರೋತ್ಸಾಹಧನ 200 ರೂ.ಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರೂ ಸಹ ಹೆಚ್ಚುವರಿ ಪ್ರೋತ್ಸಾಹಧನ 200 ರೂ ನೀಡುವ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಕಳೆದ ಜನವರಿ ತಿಂಗಳಿಂದಲೂ ಯಾವುದೇ ರೈತರಿಗೂ ಭತ್ತದ ಹಣ ಸರ್ಕಾರದಿಂದ ಪಾವತಿಯಾಗಿರುವುದಿಲ್ಲ. ಭತ್ತ ಬೆಳೆದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಭತ್ತ ಬೆಳೆಯಲು ಸಾಲ ಮಾಡಿದ್ದ ಹಣಕ್ಕೆ ಬಡ್ಡಿ ಏರಿಕೆಯಾಗುತ್ತಿದೆ. ರೈತನಿಗೆ ಇದು ಹೊರೆಯಾಗುತ್ತಿದೆ. ಆದ್ದರಿಂದ ಕೂಡಲೇ ರೈತರಿಗೆ ಹಣ ಪಾವತಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದುಒತ್ತಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.