ಕೆಆರ್ ಎಸ್ ಜಲಾಶಯದಿಂದ ನೀರು ಬಿಡಲು ಸಭೆಯಲ್ಲಿ ತೀರ್ಮಾನ

ಕೆಆರ್ ಎಸ್ ಜಲಾಶಯದಿಂದ ನೀರು ಬಿಡಲು ಸಭೆಯಲ್ಲಿ ತೀರ್ಮಾನ

LK   ¦    Jan 11, 2018 07:03:28 PM (IST)
ಕೆಆರ್ ಎಸ್ ಜಲಾಶಯದಿಂದ ನೀರು ಬಿಡಲು ಸಭೆಯಲ್ಲಿ ತೀರ್ಮಾನ

ಮಂಡ್ಯ: ಜ.13ರ ಶನಿವಾರದಿಂದ ಕೃಷ್ಣರಾಜ ಸಾಗರ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

ವಸತಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಸತಿ ಸಚಿವರ ಕಚೇರಿಯಲ್ಲಿ ನಡೆದ ಕೃಷ್ಣರಾಜ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೆ.ಆರ್.ಎಸ್.ನ ನೀರು ಸಂಗ್ರಹಣೆಯ ಪರಿಮಾಣವನ್ನು ಪರಿಗಣಿಸಿ ಕುಡಿಯುವ ನೀರು ಹಾಗೂ ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ಜ.13 ರಿಂದ ಅಚ್ಚುಕಟ್ಟಿನ ನಾಲೆಗಳಲ್ಲಿ ಕಟ್ಟುಪದ್ಧತಿಯಡಿ ನೀರು ಬಿಡಲಾಗುವುದು. ರೈತರು ಕುಡಿಯಲು ಹಾಗೂ ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ನೀರನ್ನು ಸಮರ್ಪಕವಾಗಿ ಹಾಗೂ ಮಿತ ಬಳಕೆಯಲ್ಲಿ ಉಪಯೋಗಿಸುವಂತೆ ಅಧಿಕಾರಿಗಳು ಮನವಿ ಮಾಡಲು ತಿಳಿಸಲಾಯಿತು.

ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಿದ ಸಾಗಾಣಿಕೆಯ ವೆಚ್ಚ 2.35 ಕೋಟಿ ರೂ. ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಎಂ.ಕೃಷ್ಣಪ್ಪ ಅವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಸದಸ್ಯ ಸಿ.ಎಸ್.ಪುಟ್ಟರಾಜು, ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ವಿಜಯ್ ಕುಮಾರ್ ಹಾಗೂ ಜಿಲ್ಲಾಮಟ್ಟದ ಆಧಿಕಾರಿಗಳು ಭಾಗವಹಿಸಿದ್ದರು.