ಬಿರುಗಾಳಿಯಿಂದ ಬಾಳೆ ಬೆಳೆಗೆ ಭಾರೀ ಹಾನಿ

ಬಿರುಗಾಳಿಯಿಂದ ಬಾಳೆ ಬೆಳೆಗೆ ಭಾರೀ ಹಾನಿ

LK   ¦    Mar 07, 2019 09:06:48 AM (IST)
ಬಿರುಗಾಳಿಯಿಂದ ಬಾಳೆ ಬೆಳೆಗೆ ಭಾರೀ ಹಾನಿ

ಚಾಮರಾಜನಗರ: ಮಳೆ ಸುರಿದು ಭೂಮಿ ತಂಪಾಗಿ ಬಿಸಿಲು ಧಗೆಯಿಂದ ಬಸವಳಿದವರಿಗೆ ನೆಮ್ಮದಿ ನೀಡುತ್ತದೆ ಎಂದು ಖುಷಿಯಾಗಿದ್ದ ರೈತರಿಗೆ ಮಳೆಯೊಂದಿಗೆ ಬೀಸಿದ ಬಿರುಗಾಳಿ ಕಣ್ಣಲ್ಲಿ ನೀರು ತರಿಸಿದೆ.

ಗುಂಡ್ಲುಪೇಟೆ ವ್ಯಾಪ್ತಿಯ ಬಂಡೀಪುರ ಸೇರಿದಂತೆ ಹಲವೆಡೆ ಮಳೆಯಾಗಿತ್ತು. ಆದರೆ ಕೆಲವೆಡೆ ಮಳೆಗಿಂತ ಗಾಳಿಯೇ ಜೋರಾಗಿ ಬೀಸಿದ್ದರಿಂದ ರೈತರು ಬೆಳೆದಿದ್ದ ಬಾಳೆಗಿಡಗಳು ಮುರಿದು ಬಿದ್ದಿದ್ದು ಇದರಿಂದ ಸಾವಿರಾರು ರೂಪಾಯಿ ನಷ್ಟವಾದಂತಾಗಿದೆ.

ಮೊದಲಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ನಿಧಾನವಾಗಿ ಮಳೆ ಬರಲಾರಂಭಿಸಿತ್ತು. ಬಿಸಿಲಿನ ಧಗೆಯಿಂದ ಬಸವಳಿದ್ದ ಮಂದಿ ಮಳೆ ಬರಲಾರಂಭಿಸಿದನ್ನು ಕಂಡು ಖುಷಿಪಟ್ಟಿದ್ದರು. ಆದರೆ ಮಳೆ ಜೋರಾಗಿ ಬಾರದೆ ಭಾರೀ ಬಿರುಗಾಳಿ ಬೀಸಲಾರಂಭಿಸಿದ್ದರಿಂದ ಜನ ಬೆಚ್ಚಿ ಬಿದ್ದಿದ್ದರು. ಎಲ್ಲಿ ನಮ್ಮ ಮನೆಗಳ ಛಾವಣಿ ಹಾರಿ ಹೋಗಿ ಬಿಡುತ್ತದೆಯೋ ಎಂಬ ಭಯದಲ್ಲಿ ಉಸಿರು ಬಿಗಿ ಹಿಡಿದು ಕುಳಿತಿದ್ದರು.

ಇನ್ನೊಂದೆಡೆ ಈ ವ್ಯಾಪ್ತಿಯ ರೈತರು ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಕಳೆದೊಂದು ವರ್ಷದಿಂದ ಅದನ್ನು ಜತನದಿಂದ ನೋಡಿ ಕೊಂಡು ಬಂದಿದ್ದರು. ಬಾಳೆ ಬೆಳೆದು ಗೊನೆಬಿಡುವ ಹಂತಕ್ಕೆ ಬಂದಿದ್ದವು. ಆದರೆ ಬೀಸಿದ ಗಾಳಿಗೆ ಅವುಗಳು ಮುರಿದು ಬಿದ್ದಿದ್ದು ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಾರದ ಸ್ಥಿತಿ ರೈತನದ್ದಾಗಿದೆ.

ಸಾವಿರಾರು ರೂಪಾಯಿ ಸಾಲ ಮಾಡಿ ಬಾಳೆಯನ್ನು ಬೆಳೆದಿದ್ದವು. ಇನ್ನು ಕೆಲವೇ ಸಮಯದಲ್ಲಿ ಫಸಲಿಗೆ ಬರುತ್ತಿತ್ತು. ಆದರೆ ಮಳೆಯೊಂದಿಗೆ ಗಾಳಿ ಬಂದಿದ್ದರಿಂದ ಮುರಿದು ಬಿದ್ದು ನಷ್ಟವಾಗಿವೆ. ಇದರಿಂದ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಯೋಚನೆ ಶುರುವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹಲವು ರೈತರಿಗೆ ನಷ್ಟವಾಗಿದ್ದು ಅದರಲ್ಲಿ ಚೌಡಹಳ್ಳಿ ಗ್ರಾಮದ ಪ್ರಭುಸ್ವಾಮಿ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು 500ಕ್ಕೂ ಹೆಚ್ಚಿನ ಬಾಳೆಗಿಡಗಳು ನೆಲಕ್ಕಚ್ಚಿದ್ದರಿಂದ ಅವರಿಗೆ ಸುಮಾರು 75 ಸಾವಿರ ರೂಪಾಯಿಗೂ ಹೆಚ್ಚಿನ ಬೆಳೆನಷ್ಟ ಸಂಭವಿಸಿದೆಯಂತೆ. ಸ್ಥಳಕ್ಕ್ಕೆ ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.