ಮೈಸೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಜೆಪಿ ಕಸರತ್ತು!

ಮೈಸೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಜೆಪಿ ಕಸರತ್ತು!

MY   ¦    Apr 08, 2019 04:52:48 PM (IST)
ಮೈಸೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಜೆಪಿ ಕಸರತ್ತು!

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿಗೂ ಬಿಜೆಪಿ ಅಭ್ಯರ್ಥಿಗೂ ಪ್ರಬಲ ಪೈಪೋಟಿ ಏರ್ಪಟ್ಟಿದ್ದು ಗೆಲುವಿಗಾಗಿ ಎರಡು ಕಡೆಯಿಂದಲೂ ತಂತ್ರಗಳು ನಡೆಯುತ್ತಲೇ ಸಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಪ್ರತಾಪ್ ಸಿಂಹ ಕಣಕ್ಕಿಳಿದಿದ್ದಾರೆ. ದೋಸ್ತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿಜಯಶಂಕರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಮತ್ತು ಕುರುಬ ಸಮುದಾಯಕ್ಕೆ ಸೇರಿದವರು. ಅಲ್ಲದೆ ತಮ್ಮ ಪ್ರಾಬಲ್ಯ ಮತ್ತು ಒತ್ತಡ ಹೇರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ನೋಡಿಕೊಂಡವರು.

ಜೆಡಿಎಸ್‍ನ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಿ.ಟಿ.ದೇವೇಗೌಡರು ಮಾಜಿ ಪ್ರಧಾನಿ ದೇವೇಗೌಡರು ಮೈಸೂರಿನಿಂದ ಸ್ಪರ್ಧಿಗಿಳಿಯಲಿ ಎಂಬ ಉದ್ದೇಶ ಹೊಂದಿದ್ದರು. ಆದರೆ ಅವರಂದು ಕೊಂಡಂತೆ ಯಾವುದೂ ಆಗಿರಲಿಲ್ಲ. ಜತೆಗೆ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ವಿಜಯಶಂಕರ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ನೋಡಿಕೊಂಡಿದ್ದು ಜೆಡಿಎಸ್‍ನವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಅಸಮಾಧಾನಕ್ಕೆ ತೇಪೆ ಹಚ್ಚುವ ಕಾರ್ಯವನ್ನು ಮಾಡಲಾಗಿದ್ದು, ಇನ್ನು ಮುಂದೆ ಒಟ್ಟಾಗಿ ಹೋಗುವ ತೀರ್ಮಾನ ಕೈಗೊಂಡಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯಲ್ಲಿ ಆತಂಕ ಹುಟ್ಟು ಹಾಕಿದೆ.

ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯದೊಂದಿಗೆ ಕುರುಬ ಸಮುದಾಯವೂ ಗಮನಾರ್ಹ ಸಂಖ್ಯೆಯಲ್ಲಿರುವ ಕಾರಣ ಅವರ ಮತವನ್ನು ಪಡೆಯುವ ಸಲುವಾಗಿ ತಂತ್ರಗಳು ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಇದೀಗ ಹಿಂದುಳಿದ ವರ್ಗಗಳ ಹಾಗೂ ಕುರುಬ ಸಮಾಜದ ವಿಶೇಷ ಸಭೆಯನ್ನು ಕರೆದು ಮನವೊಲಿಸುವ ಮತ್ತು ಮತಯಾಚನೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಭೆಯಲ್ಲಿ ಮುಖಂಡರನ್ನುದ್ದೇಶಿಸಿ ಮಾತನಾಡಿದ ಪ್ರತಾಪ ಸಿಂಹ ಅವರು ಭಾ.ಜ.ಪ ಒಂದು ಹಿಂದು ಸಂಘಟನೆ ನಾವೆಲ್ಲರೂ ಮೊದಲಿಂದಲೂ ನಾವೆಲ್ಲರೂ ಹಿಂದು ಎಂಬ ಭಾವನೆ ಯಿಂದ ಪಕ್ಷ ಕಟ್ಟಿದ್ದೇವೆ. ಕಳೆದ ಚುನಾವಣೆಯಲ್ಲಿ ನಾನು ಮೈಸೂರಿನ ಲೋಕಸಭಾ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಹೆಚ್ಚು ಸಹಕಾರ ನೀಡಿ ನನ್ನ ಗೆಲುವಿಗೆ ಸಹಕಾರ ಮಾಡಿದ್ದು ಹಿಂದುಳಿದ ವರ್ಗ ಹಾಗೂ ಕುರುಬ ಸಮಾಜ. ಮೈಸೂರು ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷ ಹಿಂದುಳಿದ ವರ್ಗಗಳ ಮತ ವಿದ್ದು ನರೇಂದ್ರ ಮೋದಿಯವರು ಕೂಡ ಹಿಂದುಳಿದ ವರ್ಗಗಳ ನಾಯಕರು ಆಗಿರುವುದು ಮತ್ತು ರಾಷ್ಟ್ರವ್ಯಾಪ್ತಿಯಲ್ಲಿ ನರೇಂದ್ರ ಮೋದಿಯವರ ಕೆಲಸ ಮತ್ತು ವಿದೇಶಾಂಗ ನೀತಿ, ರೈತ ಪರ ಕೆಲಸ, ಯುವಕರ ವಿದ್ಯಾಭ್ಯಾಸ ಬಗ್ಗೆ ತೆಗೆದು ಕೊಂಡಿರುವ ನಿಲುವುಗಳ ಬಗ್ಗೆ ಅರಿತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆ ಸಂದರ್ಭ ಏನೇ ಮಾಡಿದರೂ ಅದು ಚುನಾವಣಾ ಗಿಮಿಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಿದ್ದೂ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಪ್ರತಾಪ್ ಸಿಂಹ ಅವರ ತಂತ್ರ ಫಲಿಸುತ್ತಾ ಎಂಬುದು ಕೂಡ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.