ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ: ತನ್ವೀರ್ ಸೇಠ್

ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ: ತನ್ವೀರ್ ಸೇಠ್

MY   ¦    Jun 13, 2018 07:16:40 PM (IST)
ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ: ತನ್ವೀರ್ ಸೇಠ್

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನೊಬ್ಬನೆ ಗೆದ್ದಿರುವುದರಿಂದ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಮೈಸೂರಿನಲ್ಲಿ ಹೇಳಿದರು.

ಬುಧವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಆತ್ಮಾವಲೋಕನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ತನ್ವೀರ್ ಸೇಠ್, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವ ಸ್ಥಾನ ನಾನು ಯಾರ ಬಳಿಯೂ ಕೇಳಿಲ್ಲ. ಆದರೆ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕೆಲಸ ಮಾಡಿದ್ದೇನೆ. ಆ ಕೆಲಸವನ್ನು ಪಕ್ಷ ಗುರುತಿಸಿ ಮಂತ್ರಿ ಸ್ಥಾನ ಕೊಡುವ ವಿಶ್ವಾಸವಿದೆ. ನನಗೆ ಮಂತ್ರಿ ಸ್ಥಾನ ಕೊಡುವಂತೆ ನಮ್ಮ ಕಾರ್ಯಕರ್ತರು ಜಿಲ್ಲೆಯ ನಾಯಕರ ಮುಂದೆ ಪ್ರಸ್ತಾಪವನ್ನಿಟ್ಟಿದ್ದಾರೆ. ವರಿಷ್ಟರ ತೀರ್ಮಾನಕ್ಕೆ ನಾನು ಬದ್ಧ ಎಂದರು.

ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತ ಫಲಿತಾಂಶ ಬರಲಿಲ್ಲ. ಚುನಾವಣೆ ಸಂದರ್ಭದ ವಾತಾವರಣದ ಬಗ್ಗೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ದತೆಯ ಬಗ್ಗೆ ಆತ್ಮಾವಲೋಕನಾ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ನಮ್ಮ ಶಕ್ತಿ ಮೈಸೂರು ಜಿಲ್ಲೆಯಲ್ಲಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿಯ ಕೆಲಸ ಮಾಡಬೇಕು, ಒಪ್ಪಂದದ ಪ್ರಕಾರ ಚುನಾವಣೆಗೆ ಸಿದ್ದತೆಗೆ ಮಾಡಿಕೊಳ್ಳಬೇಕಾಗಿದ್ದು, ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಸೋತ ಯಾವ ಕ್ಷೇತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿಲ್ಲ. ಕೇವಲ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.