ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ: ಜಿ.ಟಿ.ಡಿ

ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ: ಜಿ.ಟಿ.ಡಿ

LK   ¦    Jul 04, 2019 07:00:03 PM (IST)
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ: ಜಿ.ಟಿ.ಡಿ

ಮೈಸೂರು: ಮೈಸೂರು ನಗರವು ಒಂದು ಪಾರಂಪರಿಕ ನಗರವಾಗಿದ್ದು, ಇಲ್ಲಿನ ಜನತೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆದು ಉತ್ತಮ ಜೀವನ ಸಾಗಿಸಲು ನಗರ ಸ್ವಚ್ಚತಾ ಹಾಗೂ ನಾಗರೀಕರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸರ್ಕಾರದ ಜನಪ್ರಿಯ ಕಾರ್ಯಕ್ರಮವಾದ ಜನಸ್ಪಂದನ ಕಾರ್ಯಕ್ರಮದ ಮೂಲಕ ಪರಿಹರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದರು.

ನಗರದ ಜೆ.ಕೆ ಮೈದಾನದಲ್ಲಿ ಗುರುವಾರ ಮೈಸೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ನಗರಾಭಿವರದ್ಧಿ ಪ್ರಾಧಿಕರದ ವತಿಯಿಂದ ಆಯೋಜಿಸಲಾಗಿದ್ದ ಜನ ಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಸಾರ್ವಜನಿಕರಿಗೆ ಪ್ರತಿನಿತ್ಯ ಕಚೇರಿಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸುವ ಸಲುವಾಗಿ ಎಲ್ಲಾ ಸಮಸ್ಯೆಗಳನ್ನು ಒಂದೇ ಸೂರಿನಡಿ ಎಲ್ಲಾ ಅಧಿಕಾರಿಗಳ ಜೊತೆ ಸ್ಥಳದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ಪ್ರಾಧಿಕಾರ ಜೊತೆಗೂಡಿ ವ್ಯವಸ್ಥಿತವಾದ ಕಾರ್ಯಕ್ರಮ ಮಾಡಲಾಗಿದ್ದು ಜನತೆಯು ದಾಖಲಾತಿಗಳೊಂದಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕಳೆದ 5 ದಿನಗಳಿಂದ ಸತತವಾಗಿ ನಗರ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯನ್ನು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಜೊತೆ ನಡೆಸಿದ್ದು, ದಸರಾ ಬರುವ ತನಕ ನಗರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ನಗರದಲ್ಲಿ 7 ಲಕ್ಷ ಟನ್ ಕಸವಿಲೇವಾರಿಗೆ ಕೂಡಲೇ ಟೆಂಡರ್ ಕರೆಯುವಂತೆ ಆದೇಶಿಸಿದ್ದು, ನಗರದ ಸ್ವಚ್ಚತಾ ಕಾರ್ಯಕ್ಕೆ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದೆ. ನಮ್ಮ ಸ್ವಚ್ಚತೆ ನಮ್ಮ ಕರ್ತವ್ಯ ಹಾಗಾಗಿ ಪ್ರತಿಯೊಬ್ಬರು ಸ್ವಚ್ಚತೆ ಬಗ್ಗೆ ಗಮನ ವಹಿಸಬೇಕು ಹಾಗೂ ಹೆಚ್ಚು ಸಸಿಗಳನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದರು.