ಜು.21ರಂದು ಬಳ್ಳಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್

ಜು.21ರಂದು ಬಳ್ಳಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್

LK   ¦    Jul 11, 2018 05:18:41 PM (IST)
ಜು.21ರಂದು ಬಳ್ಳಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್

ಮಂಡ್ಯ: ನರಗುಂದ ನವಲಗುಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣಾ ಮುನ್ನ ನೀಡಿದ್ದ ಭರವಸೆ ಈಡೇರಿಸುವಂತೆ ಆಗ್ರಹಿಸಿ ಜು.21ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಇಳಕಲ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತಸಂಘ ಎಂದೂ ರೈತರ ಸಾಲ ಮನ್ನಾ ಮಾಡುವಂತೆ ಕೇಳಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ದೊರಕದ ಹಿನ್ನೆಲೆಯಲ್ಲಿ, ತೀವ್ರ ಅತಿವೃಷ್ಠಿ ಹಾಗೂ ಬರಗಾಲದಿಂದ ತತ್ತರಿಸಿದ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಸಾಲಮನ್ನಾ ಬಗ್ಗೆ ಹೋರಾಟಕ್ಕೆ ಮುಂದಾದೆವು. ಇತ್ತೀಚೆಗೆ ಎಲ್ಲ ರಾಜಕೀಯ ಪಕ್ಷಗಳು ರೈತರು ಕೇಳದೆ ಸಾಲಮನ್ನಾ ಯೋಜನೆಯನ್ನು ಪಕ್ಷದ ಪ್ರಣಾಳಿಕೆಯಾಗಿ ಮಾಡಿಕೊಂಡಿವೆ. ರೈತರ ಸಾಲ ಮನ್ನಾ ಏಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಯಾವ ಪಕ್ಷಗಳು ಉತ್ತರ ನೀಡುತ್ತಿಲ್ಲ ಎಂದರು.

ಮೊದಲ ಹಂತದಲ್ಲಿ 56 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಬೇಕು. ಕೃಷಿ ಸಂಬಂಧಿತ ಎಲ್ಲ ಸಾಲವನ್ನು ಎರಡನೇ ಹಂತದಲ್ಲಿ ಮನ್ನಾ ಮಾಡಬೇಕು. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಸೇರಿದಂತೆ ಎಲ್ಲಾ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಚುನಾವಣಾ ಪೂರ್ವ ಭರವಸೆ ಈಡೇರಿಕೆಗೆ ಒತ್ತಾಯಿಸಿ ನಿರಂತರ ಚಳವಳಿ ಹಮ್ಮಿಕೊಳ್ಳಲಾಗುವುದು. ಜೆಡಿಎಸ್‍ನ 38 ಶಾಸಕರ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ರೈತಸಂಘದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.