ಅಂಬರೀಶ್ ಹುಟ್ಟೂರಲ್ಲಿ ಅಭಿಮಾನಿಗಳಿಂದ ಕೇಶಮುಂಡನ

ಅಂಬರೀಶ್ ಹುಟ್ಟೂರಲ್ಲಿ ಅಭಿಮಾನಿಗಳಿಂದ ಕೇಶಮುಂಡನ

LK   ¦    Dec 06, 2018 06:44:02 PM (IST)
ಅಂಬರೀಶ್ ಹುಟ್ಟೂರಲ್ಲಿ ಅಭಿಮಾನಿಗಳಿಂದ ಕೇಶಮುಂಡನ

ಮಂಡ್ಯ: ನಟ ಅಂಬರೀಶ್ ಅವರ ಪುಣ್ಯತಿಥಿ ಕಾರ್ಯವನ್ನು ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ಮಾಡಿದ ಅಭಿಮಾನಿಗಳು ಕೇಶಮುಂಡನ ಮಾಡಿ ಅಭಿಮಾನ ಸಲ್ಲಿಸಿದರು.

ಹುಟ್ಟೂರು ದೊಡ್ಡರಸಿನಕೆರೆ ಗ್ರಾಮದಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಶ್‍ರವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆದ ಬಳಿಕ ಗ್ರಾಮಸ್ಥರು ಆ ಸ್ಥಳದಿಂದ ತರಲಾಗಿದ್ದ ಅವರ ಅಸ್ಥಿಯನ್ನು ಗ್ರಾಮದ ಹೆಬ್ಬಾಗಿಲಿನ ಬಳಿ ಇಟ್ಟಿದ್ದರು. ಆ ಅಸ್ಥಿ ಮಡಿಕೆಗೆ ವಿಶೇಷ ಪೂಜೆ ಸಲ್ಲಿಸಿ ಸ್ಮಾರಕ ನಿರ್ಮಿಸಿದ್ದರು. ಗುರುವಾರ ಅಲ್ಲಿ ನೆರೆದ ಗ್ರಾಮಸ್ಥರು ಹಾಗೂ ಅಭಿಮಾನಿಗಳು ವಿಧಿ ವಿಧಾನಗಳೊಂದಿಗೆ ಅಂಬರೀಶ್ ಅವರ ಪುಣ್ಯ ತಿಥಿಯನ್ನು ನೆರವೇರಿಸಿದರು.

11ನೇ ದಿನದ ಕಾರ್ಯವನ್ನು ಸಕಲ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಮನೆ ಮಗನ ತಿಥಿಕಾರ್ಯದಂತೆ ನೆರವೇರಿಸಿ ಸ್ಮಾರಕದ ಸ್ಥಳದಲ್ಲಿ ಎಲ್ಲಾ ತಿಂಡಿ ತಿನಿಸುಗಳನ್ನಿಟ್ಟು ಗ್ರಾಮದ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಇದೇ ವೇಳೆ 11 ಮಂದಿ ಅಭಿಮಾನಿಗಳು, ಸಂಬಂಧಿಕರು ಕೇಶಮುಂಡನ ಮಾಡಿಸಿಕೊಂಡರು.

ಅಂಬರೀಶ್ ಕಟ್ಟಾಬೆಂಬಲಿಗ ರವಿಕುಮಾರ್ ಸ್ಮಾರಕದಲ್ಲಿ ಕೇಶಮುಂಡನ ಮಾಡಿಸಿಕೊಂಡು ಗಡಿಗೆ ಒಡೆದರು. ಈ ಪೂಜಾ ಕಾರ್ಯದಲ್ಲಿ ಮಹಿಳೆಯರು ಸೇರಿದಂತೆ ಗ್ರಾಮದ ಎಲ್ಲರೂ ಭಾಗವಹಿಸಿದ್ದರು. 5 ಸಾವಿರಕ್ಕೂ ಹೆಚ್ಚು ಜನರಿಗೆ ಅವರೆಕಾಳು ಕೂಟು, ರಾಗಿಮುದ್ದೆ, ಬಿಸಿಬೇಳೆಬಾತು, ಪಾಯಸ, ಖಾರಾ ಬೂಂದಿ, ಲಾಡು, ಹಪ್ಪಳ, ಮಜ್ಜಿಗೆ ಭೂರಿ ಭೋಜನ ಮಾಡಲಾಗಿತ್ತು.

More Images