ಕಟ್ಟೆಮಳವಾಡಿಯಲ್ಲಿ ಲಕ್ಷ್ಮಣತೀರ್ಥ ನದಿ ವೈಭವ

ಕಟ್ಟೆಮಳವಾಡಿಯಲ್ಲಿ ಲಕ್ಷ್ಮಣತೀರ್ಥ ನದಿ ವೈಭವ

LK   ¦    Jul 05, 2019 06:32:23 PM (IST)
ಕಟ್ಟೆಮಳವಾಡಿಯಲ್ಲಿ ಲಕ್ಷ್ಮಣತೀರ್ಥ ನದಿ ವೈಭವ

ಮೈಸೂರು: ದಕ್ಷಿಣ ಕೊಡಗಿನಲ್ಲಿ ಮುಂಗಾರು ಚೇತರಿಕೆ ಕಂಡಿರುವ ಕಾರಣ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಕೊಂಚಮಟ್ಟಿಗೆ ಏರಿಕೆಯಾಗಿರುವುದರಿಂದ ಹುಣಸೂರು ತಾಲೂಕಿನ ಕಟ್ಟೆಮಳವಾಡಿಯಲ್ಲಿರುವ ಅಣೆಕಟ್ಟೆ ಭರ್ತಿಯಾಗಿ ಜಲವೈಭವ ನಿರ್ಮಾಣವಾಗಿದೆ.

ದಕ್ಷಿಣ ಕೊಡಗಿನ ಕುಟ್ಟ ಭಾಗ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವೆಡೆ ಬೀಳುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ಹೆಚ್ಚಾಗಿದ್ದು, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ಭರ್ತಿಯಾಗಿದೆ. ಇದರಿಂದ ಹೆಚ್ಚಾದ ನೀರು ಅಣೆಕಟ್ಟೆ ಮೇಲೆ ಹರಿದು ಹೋಗುತ್ತಿದೆ.

ಈ ಅಣೆಕಟ್ಟೆಯಿಂದ ಕಿರಸೊಡ್ಲು, ಅಗ್ರಹಾರ, ಉಂಡವಾಡಿ ಮುಂತಾದ ಗ್ರಾಮಗಳ ರೈತರ ಜಮೀನಿಗೆ ಸುಮಾರು 25 ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ನೀರು ಸಿಗುತ್ತಿದೆ. ಇನ್ನು ಬಿಳಿಕೆರೆ ಗಾವಡಗೆರೆ ಚಿಲ್ಕುಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಕೂಡ ಸಹಕಾರಿಯಾಗಲಿದೆ.

ಲಕ್ಷ್ಮಣತೀರ್ಥ ನದಿಯಲ್ಲಿ ನಿಂತಿದ್ದ ಹಳೆನೀರು ಹುಣಸೂರು ಪಟ್ಟಣದ ಕೊಳಚೆ ನೀರು ತುಂಬಿ ಗಬ್ಬೆದ್ದು ನಾರುತ್ತಿತ್ತು ಹೊಸ ನೀರು ಸೇರಿ ಹರಿಯುತ್ತಿರುವುದರಿಂದ ದುರ್ವಾಸನೆ ದಾರಿಯುದ್ದಕ್ಕೂ ಬರುತ್ತಿದೆ. ಇದೇ ರೀತಿ ನೀರು ಹರಿದರೆ ಮಾತ್ರ ದುರ್ವಾಸನೆ ಕಡಿಮೆಯಾಗಲಿದೆ.

ಲಕ್ಷ್ಮಣತೀರ್ಥ ನದಿ ಹರಿಯುವ ಅಣೆಕಟ್ಟೆ ಮೇಲೆ ನೀರು ಹರಿದು ಹೋಗುವಾಗ ಮೀನು ಕಾಣಿಸಿಕೊಳ್ಳುತ್ತಿದ್ದು ಅದನ್ನು ಹಿಡಿಯುವುದರಲ್ಲಿ ಕೆಲವರು ನಿರತರಾಗಿರುವ ದೃಶ್ಯ ಕಂಡು ಬರುತ್ತಿದೆ.