ಕೊಕ್ಕರೆ ಬೆಳ್ಳೂರಿನಲ್ಲಿ ನಿಲ್ಲದ ಫೆಲಿಕಾನ್ ಹಕ್ಕಿಗಳ ಸಾವು

ಕೊಕ್ಕರೆ ಬೆಳ್ಳೂರಿನಲ್ಲಿ ನಿಲ್ಲದ ಫೆಲಿಕಾನ್ ಹಕ್ಕಿಗಳ ಸಾವು

LK   ¦    Mar 11, 2018 01:29:33 PM (IST)
ಕೊಕ್ಕರೆ ಬೆಳ್ಳೂರಿನಲ್ಲಿ ನಿಲ್ಲದ ಫೆಲಿಕಾನ್ ಹಕ್ಕಿಗಳ ಸಾವು

ಮಂಡ್ಯ: ಕೊಕ್ಕರೆ ಬೆಳ್ಳೂರಿನಲ್ಲಿ ಮತ್ತೆರಡು ಫೆಲಿಕಾನ್ ಹಕ್ಕಿಗಳು ಶನಿವಾರ ಸಾವನ್ನಪ್ಪಿದ್ದು, ಸದ್ಯಕ್ಕೆ ಈ ಹಕ್ಕಿಗಳ ಸರಣಿ ಸಾವು ನಿಲ್ಲುವಂತೆ ಕಾಣುತ್ತಿಲ್ಲ. ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದಾರೆ.

ಈಗಾಗಲೇ ಹಲವು ತಜ್ಞರು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಟ್ಟೆ ಭಾಗದಲ್ಲಿ ಜಂತು ಹುಳುಗಳು ಕಾಣಿಸಿಕೊಂಡಿದ್ದವು.

ಇಲ್ಲಿ ಕಳೆದ ಮೂರು ತಿಂಗಳಿಂದ ಸುಮಾರು 43ಕ್ಕೂ ಹೆಚ್ಚು ಫೆಲಿಕಾನ್ ಗಳು ಮೃತಪಟ್ಟಿವೆ. ಹೀಗಾಗಿ ಜನರಲ್ಲಿ ಹಕ್ಕಿಜ್ವರದ ಆತಂಕವುಂಟಾಗಿತ್ತು. ಈಗಾಗಲೇ ಪ್ರಾಥಮಿಕ ವರದಿಯ ಪ್ರಕಾರ ಕೆಲವು ಜಂತುಹುಳುಗಳ ಬಾಧೆಯಿಂದ ಮೃತಪಟ್ಟಿದ್ದರೆ, ಮತ್ತೆ ಕೆಲವು ಕಲುಷಿತ ನೀರು ಕುಡಿದು ಮೃತಪಟ್ಟಿವೆ ಎಂದು ಹೇಳಲಾಗಿದೆ. ಇದರ ನಡುವೆ ಕೆಲವು ವಿಜ್ಞಾನಿಗಳ ತಂಡ ಹಕ್ಕಿಗಳ ರಕ್ತ ಹಾಗೂ ಪಿಕ್ಕೆಯ ಮಾದರಿ ಸಂಗ್ರಹಿಸಿ ವರದಿ ನೀಡಿದ್ದು, ಹಕ್ಕಿ ಜ್ವರ ತಡೆ ರಾಸಾಯನಿಕವನ್ನು ಕೂಡ ಸಿಂಪಡಣೆ ಮಾಡಲಾಗಿತ್ತು. ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಕ್ಕಿಗಳ ಸಾವು ಮಾತ್ರ ಮುಂದುವರೆಯುತ್ತಲೇ ಇದೆ.

ಈ ನಡುವೆ ಮಾತನಾಡಿರುವ ಮೈಸೂರಿನ ವನ್ಯಜೀವಿ ವಿಭಾಗದ ಮುಖ್ಯಸ್ಥ ಏಳುಕುಂಡಲ ಅವರು, ಮಾ.12 ರಂದು ದೆಹಲಿಯ ಡಬ್ಲೂಡಬ್ಲೂಎಫ್ ಸೇರಿದಂತೆ ಬೆಂಗಳೂರು, ಉತ್ತರ ಪ್ರದೇಶ, ಕೊಯಮತ್ತೂರು, ಮುಂಬೈ, ಕೊಡಗಿನಿಂದ ತಜ್ಞರ ತಂಡವನ್ನು ಕರೆಸಿ ಸಂಪೂರ್ಣ ಅಧ್ಯಯನ ನಡೆಸಿ ಸಾವಿನ ನಿಖರತೆ ತಿಳಿಯಲಾಗುವುದು ಎಂದು ತಿಳಿಸಿದ್ದಾರೆ.