15 ಜನರ ಮೇಲೆ ಹುಚ್ಚು ನಾಯಿ ದಾಳಿ

15 ಜನರ ಮೇಲೆ ಹುಚ್ಚು ನಾಯಿ ದಾಳಿ

LK   ¦    Jan 12, 2018 07:50:24 PM (IST)
15 ಜನರ ಮೇಲೆ ಹುಚ್ಚು ನಾಯಿ ದಾಳಿ

ಭಾರತೀನಗರ: ಹುಚ್ಚು ನಾಯಿಯೊಂದು ಗ್ರಾಮದ ಜನ ಸೇರಿದಂತೆ ಜಾನುವಾರಗಳಿಗೆ ಕಚ್ಚಿದ ಪರಿಣಾಮ 15 ಮಂದಿ ಗಾಯಗೊಂಡಿರುವ ಘಟನೆ ಸಮೀಪದ ಕರಡಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ಗೌರಮ್ಮ(59), ಲಕ್ಷ್ಮಮ್ಮ(51), ತಿಮ್ಮಮ್ಮ(79), ಬೋರೇಗೌಡ(42), ಜಯಮ್ಮ(47), ಶಿವಲಿಂಗೇಗೌಡ(61), ಶ್ರೇಯಾ(17), ಹನುಮಮ್ಮ(89) ಸೇರಿದಂತೆ 15 ಮಂದಿಗೆ ಅಲ್ಲದೆ, 2 ಹಸು ಮತ್ತು 4 ಕರುಗಳಿಗೂ ಕಚ್ಚಿ ಗಾಯಗೊಳಿಸಿದೆ.

ಗೌರಮ್ಮ ಮತ್ತು ಹನುಮಮ್ಮ ಅವರಿಗೆ ಗಂಭೀರ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿ ದಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು ಗ್ರಾ.ಪಂ. ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಚ್ಚು ನಾಯಿ ಮೊದಲು ಇಬ್ಬರಿಗೆ ಕಚ್ಚಿದ್ದು ಎಚ್ಚೆತ್ತ ಗ್ರಾಮಸ್ಥರು ಗ್ರಾಮದ ಹೊರ ವಲಯದ 4 ಕಿ.ಮೀ ವರೆಗೆ ನಾಯಿಯನ್ನು ಓಡಿಸಿದ್ದಾರೆ. ಆದರೆ ಮತ್ತೆ ಸಂಜೆ ವೇಳೆಗೆ ಬಂದ ನಾಯಿ ಮತ್ತೆ ದಾಳಿ ಮುಂದುವರೆಸಿ ಸುಮಾರು 15 ಮಂದಿಗೆ ಕಡಿದಿದೆ. ಜತೆಗೆ ಜಾನುವಾರುಗಳ ಮೇಲೆಯೂ ದಾಳಿ ಮಾಡಿದೆ. ಇದರಿಂದ ರೊಚ್ಚಿಗೆದ್ದ ಜನ ನಾಯಿಯನ್ನು ಹೊಡೆದು ಸಾಯಿಸಿದ್ದಾರೆ. ನಾಯಿ ಕಚ್ಚಿರುವ ಕೆಲವು ಮಂದಿಯನ್ನು ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ, ಇನ್ನೂ ಕೆಲವರನ್ನು ಇಲ್ಲಿನ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ವಹಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.