ಪಿರಿಯಾಪಟ್ಟಣದಲ್ಲಿ ಮಲೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಪಿರಿಯಾಪಟ್ಟಣದಲ್ಲಿ ಮಲೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

LK   ¦    Nov 08, 2018 04:07:00 PM (IST)
ಪಿರಿಯಾಪಟ್ಟಣದಲ್ಲಿ ಮಲೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಪಿರಿಯಾಪಟ್ಟಣ: ಪಟ್ಟಣದ ಮಲೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ಪ್ರತಿವರ್ಷವೂ ಕೂಡ ದೀಪಾವಳಿ ಹಬ್ಬದ ಅಂಗವಾಗಿ 4 ದಿನಗಳ ಕಾಲ ಮಲೆ ಮಹದೇಶ್ವರಸ್ವಾಮಿಗೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಜಾತ್ರಾ ಮಹೋತ್ಸವ ಮಾಡುವ ಸಂಪ್ರದಾಯವಿದೆ.

ಮೊದಲನೇ ದಿನದಂದು ಪಟ್ಟಣದ ಜಪದಕಟ್ಟೆ ಮಠದಿಂದ ಮಹದೇಶ್ವರಸ್ವಾಮಿಯ ಮೂಲ ವಿಗ್ರಹವನ್ನು ದೇವಸ್ಥಾನಕ್ಕೆ ತರಲಾಗುತ್ತದೆ, ನಂತರ ಎಣ್ಣೆಮಜ್ಜನ, ಹಾಲಹರವಿ ಸೇವೆ, ಹೀಗೆ ವಿವಿಧ ರೀತಿಯ ಅಭಿಷೇಕಗಳನ್ನು ಇದೇ ಸಂದರ್ಭದಲ್ಲಿ ಸ್ವಾಮಿಗೆ ನೆರವೇರಿಸಲಾಗುತ್ತದೆ.

ಮೂರನೇ ದಿನ ಗುರುವಾರ ಬೆಳಿಗ್ಗೆಯಿಂದಲೇ ರಥವನ್ನು ವಿವಿಧ ಹೂಗಳಿಂದ ಅಲಂಕರಿಸಿ ಮಲೆ ಮಹದೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಕೂರಿಸಿ ಭಕ್ತರೆಲ್ಲರೂ ರಥವನ್ನು ಎಳೆದು ಹಣ್ಣುಜವನ ಎಸೆದು ಭಕ್ತಿ ಸಮರ್ಪಿಸುವುದರ ಮೂಲಕ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಇದರ ಜೊತೆಗೆ ನಗಾರಿ, ಮಂಗಳವಾದ್ಯಗಳು ಕೂಡ ರಥೋತ್ಸವಕ್ಕೆ ಮೆರುಗನ್ನು ಹೆಚ್ಚಿಸಿದವು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ವಿವಿಧ ಬಗೆಯ ತಿಂಡಿ ತಿನಿಸು, ಕಡಲೆಪುರಿ, ಮಕ್ಕಳ ಆಟಿಕೆ ಸಾಮಗ್ರಿ ಮಳಿಗೆ, ಸೇರಿದಂತೆ ಇತರೆ ಅಂಗಡಿ ಮಳಿಗೆಗಳು ಭಕ್ತರನ್ನು ಆಕರ್ಷಿಸಿದವು.

ರಥೋತ್ಸವದ ದಿನದಂದೇ ರಾತ್ರಿಕೊಂಡೋತ್ಸವ ಕೂಡ ನೆರವೇರಿಸಿ ಮಾರನೆ ದಿನ ಶುಕ್ರವಾರ ವಿವಿಧ ಕಲಾತಂಡ, ನಗಾರಿ ತಂಡ, ವೇಷಭೂಷಣ ತೊಟ್ಟ ಬೊಂಬೆ ನೃತ್ಯ ಸೇರಿದಂತೆ ಮಲೆ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅಂತಿಮವಾಗಿ ಮಹದೇಶ್ವರಸ್ವಾಮಿಯ ವಿಗ್ರಹವನ್ನು ಜಪದಕಟ್ಟೆಯ ಮಠಕ್ಕೆ ತಲುಪಿಸಲಾಗುವುದು ಎಂದು ಅರ್ಚಕರಾದ ತೋಟಪ್ಪಶಾಸ್ತ್ರಿ ತಿಳಿಸಿದರು.

ತಾಲೂಕಿನ ಬೆಟ್ಟದಪುರದಲ್ಲಿ ಸಿಡಿಲು ಮಲ್ಲಿಕಾರ್ಜುನಸ್ವಾಮಿಯ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರು ಪಂಜಿನ ಮೂಲಕ ಸಿಡಿಲು ಮಲ್ಲಿಕಾರ್ಜುನಸ್ವಾಮಿಗೆ ದೀವಟಿಗೆ ಸೇವೆ ಅರ್ಪಿಸಿದರು.