ಮಹಾಮಳೆ- ಪ್ರವಾಹಕ್ಕೆ ಮೈಸೂರಲ್ಲಿ ಓರ್ವ ಸಾವು: ಗ್ರಾಮಗಳು ಜಲಾವೃತ

ಮಹಾಮಳೆ- ಪ್ರವಾಹಕ್ಕೆ ಮೈಸೂರಲ್ಲಿ ಓರ್ವ ಸಾವು: ಗ್ರಾಮಗಳು ಜಲಾವೃತ

LK   ¦    Aug 09, 2019 05:07:22 PM (IST)
ಮಹಾಮಳೆ- ಪ್ರವಾಹಕ್ಕೆ ಮೈಸೂರಲ್ಲಿ ಓರ್ವ ಸಾವು: ಗ್ರಾಮಗಳು ಜಲಾವೃತ

ಮೈಸೂರು: ಮೈಸೂರು ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನಗಳಿಂದ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ ಕಬಿನಿ, ತಾರಕ ಮತ್ತು ನುಗು ಜಲಾಶಯ ಭರ್ತಿಯಾಗಿದ್ದು, 1.25 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಹೆಚ್.ಡಿ.ಕೋಟೆ, ನಂಜನಗೂಡು ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿವುಂಟಾಗಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿದೆ.

ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಿಂದ ವಾಸದ ಮನೆಯ ಗೋಡೆ ಕುಸಿದು ಬಿದ್ದು ಗಣೇಶ (35) ಎಂಬಾತ ಸಾವನ್ನಪ್ಪಿದ್ದಾನೆ.

ಈಗಾಗಲೇ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಜನಗೂಡಿನ ಸಮೀಪ ಮಲ್ಲನಮೂಲೆ ತಿರುವಿನಲ್ಲಿ ನದಿಯ ತುಂಬಿ ಹರಿಯುತ್ತಿರುವುದರಿಂದ ಈ ಮಾರ್ಗವನ್ನು ಮುಚ್ಚಲಾಗಿದ್ದು, ವರುಣಾ- ಕುಪ್ಪೆಗಾಲ- ತಾಯೂರು ಮೂಲಕ ನಂಜನಗೂಡಿಗೆ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ನಂಜನಗೂಡು ತಾಲೂಕಿನಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಜನ ಸಂಕಷ್ಟದಲ್ಲಿದ್ದು, ಮೈಸೂರು ನಂಜನಗೂಡು ಮಾರ್ಗವಲ್ಲದೆ ಹೆಜ್ಜಿಗೆ ಬ್ರಿಡ್ಜ್ ನೀರು ತುಂಬಿರುವುದರಿಂದ ಆ ಮಾರ್ಗ ಬಂದ್ ಮಾಡಲಾಗಿದೆ. ಇನ್ನು ರಾಂಪುರ, ಸುತ್ತೂರು ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಮಾರ್ಗ ಬಂದ್ ಆಗಿದೆ.

ಜಲಾವೃತಗೊಂಡ ಪ್ರದೇಶಗಳಿಂದ ರಕ್ಷಣೆ ಮಾಡಿದ್ದು, ಸಂತ್ರಸ್ತರಿಗೆ ನಂಜನಗೂಡು ಪಟ್ಟಣದಲ್ಲ್ಲಿ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪೈಕಿ ಗಿರಿಜಾ ಕಲ್ಯಾಣ ಕೇಂದ್ರದಲ್ಲಿ ಸುಮಾರು 60, ರಾಜಾಜಿ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ 25, ಬೊಕ್ಕಹಳ್ಳಿ ಸರ್ಕಾರಿ ಶಾಲೆಯಲ್ಲಿ 10 ಸಂತ್ರಸ್ತರು ಆಶ್ರಯ ಪಡೆದಿದ್ದರೆ, ಸೀತಾರಾಮ ಕಲ್ಯಾಣ ಕೇಂದ್ರದಲ್ಲಿ ಯಾವುದೇ ಸಂತ್ರಸ್ತರು ಇನ್ನೂ ಆಶ್ರಯ ಪಡೆದಿಲ್ಲ.

More Images