ವಿದ್ಯಾರ್ಥಿಗಳಿಗೆ ಕೃಷಿ ಪಾಠ ಕಲಿಸಿದ ಜಿಪಂ ಮಾಜಿ ಅಧ್ಯಕ್ಷೆ

ವಿದ್ಯಾರ್ಥಿಗಳಿಗೆ ಕೃಷಿ ಪಾಠ ಕಲಿಸಿದ ಜಿಪಂ ಮಾಜಿ ಅಧ್ಯಕ್ಷೆ

LK   ¦    Sep 09, 2019 05:52:08 PM (IST)
ವಿದ್ಯಾರ್ಥಿಗಳಿಗೆ ಕೃಷಿ ಪಾಠ ಕಲಿಸಿದ ಜಿಪಂ ಮಾಜಿ ಅಧ್ಯಕ್ಷೆ

ಮೈಸೂರು: ಇತ್ತೀಚಿನ ದಿನಗಳಲ್ಲಿ ಕೃಷಿಕರೇ ಕೃಷಿಯತ್ತ ನಿರಾಸಕ್ತಿ ತೋರುತ್ತಿದ್ದು, ವಿದ್ಯಾವಂತರಂತು ಕೃಷಿಯಿಂದಲೇ ದೂರ ಉಳಿಯುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಆಹಾರಕ್ಕೆ ಹಾಹಾಕಾರ ಬರುವ ದಿನಗಳು ದೂರವಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.

ಕೃಷಿ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಿಂದಲೇ ಆಸಕ್ತಿ ಮೂಡಿಸುವ ಮೂಲಕ ಮತ್ತು ಕೃಷಿ ಕುರಿತಂತೆ ಅವರಿಗೆ ಮಾಹಿತಿ ನೀಡಿ ಲಾಭದ ಬಗ್ಗೆ ತಿಳಿ ಹೇಳಿ ಕೃಷಿ ಬಗ್ಗೆ ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಹೀಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಕುರಿತು ಅರಿವು ಮಾಡಿಸುವ ಕೆಲಸವನ್ನು ಹುಣಸೂರು ತಾಲೂಕಿನ ಉದ್ದೂರು ನಾಲಾ ಉಯಿಗೊಂಡನಹಳ್ಳಿ ಹೊಸೂರು ಗ್ರಾಮದ ರೈತ ಮಂಚಯ್ಯರವರ ಜಮೀನಿನಲ್ಲಿ ಮಾಜಿ ಜಿಪಂ ಅಧ್ಯಕ್ಷೆ ಡಾ.ಪುಷ್ಪಅಮರ್ ನಾಥ್ ಮಾಡಿದ್ದಾರೆ.

ಬನ್ನಿಕುಪ್ಪೆ ಸರ್ಕಾರಿ ಪ್ರೌಢಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪಅಮರ್ ನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪ್ರಗತಿ ಪರ ರೈತರ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿಯ ಬಗ್ಗೆ ಅರಿತುಕೊಂಡರು.

ಇದಕ್ಕೂ ಮೊದಲು ನಾಲ್ಕು ಗೋಡೆಯ ಶಾಲಾ ಕೊಠಡಿಯ ಪಾಠದಿಂದ ರೈತರ ಜಮೀನಿನ ಕಡೆಗೆ, ಶಾಲೆಯ ಮಕ್ಕಳ ಕಲಿಕೆಯ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಡಾ.ಪುಷ್ಪಅಮರ್ ನಾಥ್ ಅವರು ತಾವೇ ಗದ್ದೆಗಿಳಿದು ನಾಟಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಬಳಿಕ ಮಾತನಾಡಿ ಮುಂದಿನ ದಿನಗಳಲ್ಲಿ ದೇಶದ ಆಹಾರ ಭದ್ರತೆಗೆ ತಾವೆಲ್ಲರೂ ಕೈಜೋಡಿಸಬೇಕೆಂದು ಹೇಳುತ್ತಾ ವಿದ್ಯಾರ್ಥಿಗಳು, ಯುವಜನತೆ ಕೃಷಿಯ ಬಗ್ಗೆ ನೈಜವಾಗಿ ತಿಳುವಳಿಕೆ ಪಡೆಯಬೇಕು. ಮಕ್ಕಳು ಸ್ವತಃ ಗದ್ದೆಗಿಳಿದರೆ ಮಾತ್ರ ಕೃಷಿಯ ಕಷ್ಟ-ಕೃಷಿಯ ನೈಜ ತಿಳುವಳಿಕೆ ಬರಲು ಸಾಧ್ಯ. ಕೃಷಿಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಅಳವಡಿಸಬೇಕು. ನಮ್ಮ ಆಹಾರ ಬೆಳೆಯಾದ ಭತ್ತದ ಉತ್ಪಾದನೆ ಯಾವ ರೀತಿ ಆಗುತ್ತದೆ ಎಂಬ ಮಾಹಿತಿ ಹೆಚ್ಚಿನ ಮಕ್ಕಳಿಗೆ ಇರುವುದಿಲ್ಲ. ಈಗ ಗದ್ದೆ ಕಾಣುವುದೇ ವಿರಳ. ಹೀಗಾಗಿ, ಭತ್ತ ಬೆಳೆಯುವುದು ಹೇಗೆ? ಬಿತ್ತನೆ, ನಾಟಿ ಮೊದಲಾದ ವಿಚಾರ ತಿಳಿಸುವ ನಿಟ್ಟಿನಲ್ಲಿ ಹಾಗೂ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಗದ್ದೆಂiÀiಲ್ಲಿ ಭತ್ತದ ಕೃಷಿಯ ಕುರಿತು ನಾಟಿ ಮಾಡುವ ಮೂಲಕ ಅರಿವು ಮೂಡಿಸಿದರು.

ಈ ವೇಳೆ ಶಾಲಾ ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಂಡು ಭತ್ತದ ನಾಟಿ ಮಾಡಿದರು.