ಹುಣಸೂರು ಬಳಿ ದರೋಡೆಗೆ ಯತ್ನಿಸಿದ ಐವರ ಬಂಧನ

ಹುಣಸೂರು ಬಳಿ ದರೋಡೆಗೆ ಯತ್ನಿಸಿದ ಐವರ ಬಂಧನ

LK   ¦    Jan 11, 2018 12:49:48 PM (IST)
ಹುಣಸೂರು ಬಳಿ ದರೋಡೆಗೆ ಯತ್ನಿಸಿದ ಐವರ ಬಂಧನ

ಹುಣಸೂರು: ಹೆದ್ದಾರಿ ದರೋಡೆಗಾಗಿ ಹೊಂಚು ಹಾಕುತ್ತಿದ್ದ ಐವರು ಖದೀಮರನ್ನು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಮಾಲು ಸಹಿತ ಸೆರೆ ಹಿಡಿಯುವಲ್ಲಿ ಹುಣಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಪ್ಪ ಗ್ರಾಮದ ಬಾಬುಜಾನ್ರವರ ಪುತ್ರ ಅಮೀರ್, ಚಂದನಸ್ವಾಮಿ ಪುತ್ರ ಫ್ರ್ರಾನ್ಸಿಸ್, ಗಿರಗೂರ್ ಗ್ರಾಮದ ದಿ. ಅಬ್ದುಲ್ಲ ಅವರ ಪುತ್ರ ಫೆೈರೂಜ್, ವಿರಾಜಪೇಟೆಯ ಸಿದ್ದಾಪುರದ ನಾಗರಾಜು ಪುತ್ರ ಕಾರು ಚಾಲಕ ರಮೇಶ ಅಲಿಯಾಸ್ ಬಿಕ್ಲ ಹಾಗೂ ಸುನೀಲ್ ಬಂಧಿತ ಆರೋಪಿಗಳು.

ಇವರು ಮಂಗಳವಾರ ರಾತ್ರಿ ಕೆಎ 05, ಎಂಜೆ 8899 ನಂಬರಿನ ಸ್ಕಾರ್ಪಿಯೋ ವಾಹನದಲ್ಲಿ ವಿರಾಜಪೇಟೆ ರಸ್ತೆಯಲ್ಲಿರುವ ಬೋರೆಹೊಸಳ್ಳಿ ಗೇಟ್ ಬಳಿ ಚಿಲ್ಕುಂದ ಕಡೆಯಿಂದ ಬರುತ್ತಿದ್ದ ಎರಡು ಮೂರು ವಾಹನಗಳನ್ನು ತಡೆಗಟ್ಟಿದ್ದರು. ಆದರೆ ವಾಹನ ಚಾಲಕರು ವಾಹನ ನಿಲ್ಲಿಸದೆ ಪಿರಿಯಾಪಟ್ಟಣಕ್ಕೆ ತೆರಳಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಅಲ್ಲಿನ ಪೊಲೀಸರು ಹುಣಸೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಜಾಗೃತರಾದ ವೃತ್ತ ನಿರೀಕ್ಷಕ ಪೂವಯ್ಯ, ಪಿಎಸ್ಐ ಪುಟ್ಟಸ್ವಾಮಿ ಅವರು ಡಿವೈಎಸ್ಪಿ ಭಾಸ್ಕರ್ ರೈ ಅವರ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನು ರಚಿಸಿ ಖಾಸಗಿ ವಾಹನಗಳಲ್ಲಿ ಮೂರು ಕಡೆಗಳಿಂದ ಸಿನಿಮೀಯ ರೀತಿಯಲ್ಲಿ ಸುತ್ತುವರೆದು ಆರೋಪಿಗಳನ್ನು ಸ್ಕಾರ್ಪಿಯೊ ಸಹಿತ ಬಂಧಿಸಿ ಅವರ ಬಳಿಯಿದ್ದ 37 ಸಾವಿರ ನಗದು, ಎರಡು ಗರಗಸ, ಎರಡು ಮಚ್ಚು, ಒಂದು ಲಾಂಗು, 5 ಕಾರದ ಪುಡಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಅರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಕಳೆದ ಮೂರು ತಿಂಗಳಿನಿಂದ ರಾತ್ರಿ ವೇಳೆ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದರು. ಈಗಾಗಲೇ ಐದು ಕಡೆ ಮರಗಳನ್ನು ಕಡಿದು ಮಾರಾಟ ಮಾಡಿದ್ದು, ಮರ ಕಡಿಯಲು ಮರಗಳು ಸಿಗದ ಕಾರಣ ರಸ್ತೆ ದರೋಡೆಗಾಗಿ ಕಾಯುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆರೋಪಿಗಳು 2 ಕಡೆ 8 ಮರ, ತಟ್ಟೆಕೆರೆ ಗ್ರಾಮದ ರಾಧಾಕೃಷ್ಣ ಅವರ ತೋಟದಲ್ಲಿ 4 ಮರ, ಅದೇ ಗ್ರಾಮದ ರುಕ್ಮಾಗದ ಅವರ ತೋಟದಲ್ಲಿ 4 ಮರ ಅತ್ತಿಕುಪ್ಪೆ ಸಿದ್ದರಾಜು ಅವರ ತೋಟದಲ್ಲಿ 5 ಮರ, ಸಣ್ಣೆಗೌಡರ ಕಾಲೋನಿಯ ಉದ್ದೂರ್ ಕಾವಲ್ ಬಾಲಗಂಗಾಧರ ಅವರ ಜಮೀನಿನಲ್ಲಿ 4 ಮರ, ಚಿಲ್ಕುಂದ ಗ್ರಾಮ ಗುರುನಾಥ್ ಅವರ ಅಡಿಕೆ ತೋಟದಲ್ಲಿ 1 ಮರ, ಸೇರಿದಂತೆ ಮೂರು ತಿಂಗಳ ಅವಧಿಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ತೇಗದ ಮರಗಳನ್ನು ಕಡಿದು ಸಾಗಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ಪೂವಯ್ಯ, ಪಿಎಸ್ಐ ಪುಟ್ಟಸ್ವಾಮಿ, ಮುಖ್ಯಪೇದೆ ಬಸಪ್ಪ, ದಫೇದಾರ್ ಲೊಕೇಶ್, ಸಿಬ್ಬಂದಿ ಸಂತೋಷ್, ಮೋಹನ್, ಕುಮಾರ್, ದಿನೇಶ್, ನವೀನ್, ಕುಮಾರ್, ರವಿ, ಪ್ರೊಬೇಷನರಿ ಪಿಎಸ್ಐ ರವಿಕುಮಾರ್ ಭಾಗವಹಿಸಿದ್ದರು.

More Images