ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಸರ್ಕಾರದ ವಿರುದ್ಧ ಪ್ರತಿಭಟನೆ

ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಸರ್ಕಾರದ ವಿರುದ್ಧ ಪ್ರತಿಭಟನೆ

LK   ¦    Jun 08, 2019 03:55:32 PM (IST)
ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಸರ್ಕಾರದ ವಿರುದ್ಧ ಪ್ರತಿಭಟನೆ

ಮೈಸೂರು: ಮಾಧ್ಯಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಹತ್ತಿಕ್ಕುವ ರಾಜ್ಯ ಸರ್ಕಾರದ ಪ್ರಯತ್ನದ ವಿರುದ್ಧ ನಗರದ ನ್ಯಾಯಾಲಯದ ಬಳಿ ಮೈಸೂರು ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯನ್ನು ಶನಿವಾರ ನಡೆಸಲಾಯಿತು.

ಇತ್ತೀಚೆಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳನ್ನು ಟೀಕಿಸುವ ಪತ್ರಕರ್ತರ ವಿರುದ್ದ ಮೊಕದ್ದಮೆ ದಾಖಲಿಸುವುದು ಹೆಚ್ಚುತ್ತಿದೆ ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಬರೆಯುವವರನ್ನು ಜೈಲಿಗಟ್ಟುವ ಕೆಟ್ಟ ಪದ್ದತಿ ರಾಜ್ಯದಲ್ಲಿ ಆರಂಭವಾಗಿದೆ.

ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಅವುಗಳ ಸ್ವಾತಂತ್ರ್ಯ ಹರಣ ಮಾಡಿದರೆ, ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಂತೆ. ಈ ಅಸಹಿಷ್ಣುತೆಯ ವಿರುದ್ಧ ಮೈಸೂರು ರಕ್ಷಣಾ ವೇದಿಕೆಯು ಪ್ರತಿಭಟನೆ ನಡೆಸಿರುವುದಾಗಿ ಪ್ರತಿಭಟನಾಕಾರರು ಹೇಳಿದರು.

ವೇದಿಕೆಯ ಅಧ್ಯಕ್ಷರಾದ ಮೈ.ಕಾ.ಪ್ರೇಮ್ ಕುಮಾರ್ ಮಾತನಾಡಿ, ಈ ಹಿಂದೆಯೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಧ್ಯಮಗಳ ವಿರುದ್ದ ಅವಾಚ್ಯ ಪದಗಳನ್ನು ಬಳಸಿದ್ದರು, ನಂತರವೂ ಪತ್ರಕರ್ತರ ವಿರುದ್ದ ಮೊಕದ್ದಮೆ ದಾಖಲಿಸಿ ತೊಂದರೆ ನೀಡಿದರು, ಈಗಂತೂ ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟು ಹತಾಷರಾಗಿ ನಿತ್ಯ ಎದುರಾಗುವ ಮಾಧ್ಯಮಗಳ ಮೇಲೆ ದರ್ಪ ತೋರಿಸುವ ಮಟ್ಟಕ್ಕೆ ಇಳಿದಿರುವುದು ಖಂಡನೀಯ, ಮತ್ತು ಇದನ್ನು ಕಂಡು ಕುರುಡರಂತೆ ವರ್ತಿಸುತ್ತಿರುವ ಕಾಂಗ್ರೆಸ್ ಮುಖಂಡರ ವರ್ತನೆಯೂ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ನುಡಿದರು.ಪ್ರತಿಭಟನೆಯಲ್ಲಿ ಮಾಧ್ಯಮ ಹಕ್ಕು-ಸ್ವಾತಂತ್ರ್ಯ ಉಳಿಸುವಂತೆ, ಮಾಧ್ಯಮ ವಿರೋಧಿ ಧೋರಣೆ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

ಯುವ ಮುಖಂಡ ವಿಕ್ರಂ ಅಯ್ಯಂಗಾರ್ ಮಾತನಾಡಿ ನಿಮ್ಮ ಮೈತ್ರಿ ಆಡಳಿತ ಸರಿಯಾಗಿದ್ದರೆ ನಿಮಗೆ ಮಾಧ್ಯಮದ ಮೇಲೆ ಕೋಪ ಯಾಕೆ? ಬಹುಶಃ ನಿಮ್ಮ ಆಡಳಿತದ ಮೇಲೆ ನಿಮಗೆ ನಂಬಿಕೆ ಇಲ್ಲ, ಕಾರಣ ಮೈತ್ರಿ ಸರ್ಕಾರದಲ್ಲಿ ಹಗ್ಗ ಜಗ್ಗಾಟ. ಇನ್ನಾದರೂ ಸರಿಯಾದ ಆಡಳಿತ ಜನರಿಗೆ ಕೊಡಿ. ಕೋಪ ದುಃಖಕ್ಕೆ ಮೂಲ. ಜನ ತುಂಬಾ ಗಮನಕೊಟ್ಟು ಸರ್ಕಾರದ ವೈಖರಿ ನೋಡುತ್ತಿದ್ದಾರೆ. ಮುಂದೆ ನಿಮಗೆ ನಿಮ್ಮ ಪಕ್ಷಕ್ಕೆ ಹಾನಿ ಖಂಡಿತ. ಕೋಪ ಬಿಟ್ಟು ಒಳ್ಳೆಯ ಆಡಳಿತ ನೀಡಿ ಆಗ ಮಾಧ್ಯಮದವರೇ ಆಡಳಿತ ಚೆನ್ನಾಗಿದೆ ಅನ್ನುತಾರೆ" ಎಂದು ನುಡಿದರು

ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಸಲಹೆಗಾರರಾದ ಎಂ.ಎ.ಮೋಹನ್, ಮುಖಂಡರಾದ ವಿಕ್ರಮ್ ಐಯ್ಯಂಗಾರ್, ಎಂ.ಜಿ.ಮಹೇಶ್, ಸುಂದರ್, ಕಡಕೊಳ ಜಗದೀಶ್, ಜಯಸಿಂಹ, ನಿಶಾಂತ್, ಲೋಹಿತ್, ಸಂದೇಶ್ ಪವಾರ್, ಚಕ್ರಪಾಣಿ, ಪ್ರಶಾಂತ್ ಸೇರಿದಂತೆ ಇನ್ಮಿತರರು ಭಾಗವಹಿಸಿದ್ದರು.