ಇಂಡೋ ಇಂಟರ್ ನ್ಯಾಷನಲ್ ಪ್ರಿಮಿಯರ್ ಕಬಡ್ಡಿ ಲೀಗ್ ಪಂದ್ಯಾವಳಿ

ಇಂಡೋ ಇಂಟರ್ ನ್ಯಾಷನಲ್ ಪ್ರಿಮಿಯರ್ ಕಬಡ್ಡಿ ಲೀಗ್ ಪಂದ್ಯಾವಳಿ

LK   ¦    May 07, 2019 05:42:44 PM (IST)
ಇಂಡೋ ಇಂಟರ್ ನ್ಯಾಷನಲ್ ಪ್ರಿಮಿಯರ್ ಕಬಡ್ಡಿ ಲೀಗ್ ಪಂದ್ಯಾವಳಿ

ಮಂಡ್ಯ: ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಹಾಗೂ ಡಿಡಿ ಸ್ಪೋರ್ಟ್ಸ್ ಸಹಯೋಗದಲ್ಲಿ ಮೇ 13ರಿಂದ ಜೂನ್ 4ರವರೆಗೆ ಸುಮಾರು 45 ದಿನಗಳ ಕಾಲ 8 ತಂಡಗಳೊಂದಿಗೆ ಇಂಡೋ ಇಂಟರ್ ನ್ಯಾಷನಲ್ ಪ್ರಿಮಿಯರ್ ಕಬಡ್ಡಿ ಲೀಗ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಸಿ.ಹೊನ್ನಪ್ಪಗೌಡ ತಿಳಿಸಿದರು.

ಮೇ 13ರಂದು ಪುಣೆಯಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ನಂತರ ಮೈಸೂರಿನ ಚಾಮುಂಡಿ ಕ್ರೀಡಾಂಗಣ ಹಾಗೂ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿ ನಡೆಯುವ ಸಂಜೆ 8 ರಿಂದ 10.30ರವರೆಗೆ ಡಿಡಿ ಸ್ಪೋರ್ಟ್ಸ್ ಹಾಗೂ ಎಂಟಿವಿ ಚಾನೆಲ್‍ನಲ್ಲಿ ನೇರ ಪ್ರಸಾರ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಟೂರ್ನಮೆಂಟ್ ರೀತಿಯಲ್ಲಿಯೇ ಇಂಡೋ ಇಂಟರ್ ನ್ಯಾಷನಲ್ ಪ್ರಿಮಿಯರ್ ಕಬಡ್ಡಿ ಲೀಗ್ ನಡೆಯಲಿದೆ. ಸ್ಥಳೀಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಬಡ್ಡಿ ಆಟಗಾರರನ್ನು ಗುರುತಿಸಿ ಈ ಲೀಗನ್ನು ನಡೆಸಲಾಗುತ್ತಿದೆ. ಪ್ರೋ ಕಬಡ್ಡಿ ಲೀಗ್ ಕೇವಲ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಒಳಗೊಂಡಿದೆ. ಅದಕ್ಕೆ ಪೈಪೋಟಿ ನೀಡಲು ಸ್ಥಳೀಯ ಆಟಗಾರರನ್ನು ಈ ಲೀಗ್ ಒಳಗೊಂಡಿದೆ. ದಿಲ್ಲೇರ್ ದಿಲೆ ದೆಹಲಿ, ತೆಲುಗು ಬುಲ್ಸ್, ಪುಣೆ ಪ್ರೈಟ್ಸ್, ಬೆಂಗಳೂರು ರೈನೋಸ್, ಹರಿಯಾಣ ಹಿರೋಸ್, ಪಾಂಡಿಚೇರಿ ಪ್ರೀಡಿಯೇಟರ್ಸ್ ಹಾಗೂ ಚೆನ್ನೈ ಚಾಲೆಂಜರ್ಸ್ ತಂಡಗಳು ಭಾಗವಹಿಸಲಿವೆ.

ಇದರಲ್ಲೂ ಹೊರ ದೇಶದ ಆಟಗಾರರು ಇರಲಿದ್ದಾರೆ. ಮಂಡ್ಯ ಜಿಲ್ಲೆಯಿಂದ ಮೂವರು ಆಟಗಾರರು ಪ್ರತಿನಿಧಿಸುತ್ತಿದ್ದಾರೆ. ತೆಲುಗು ಬುಲ್ಸ್ ತಂಡದಲ್ಲಿ ಅಭಿಷೇಕ್, ದಿಲ್ಲೇರ್ ದಿಲೆ ದೆಹಲಿ ತಂಡದಲ್ಲಿ ಶಶಿಧರ್, ಪುಣೆ ಪ್ರೈಡ್ಸ್ ತಂಡದಲ್ಲಿ ವೆಂಕಟೇಶ್ ಆಡಲಿದ್ದಾರೆ ಎಂದರು.

ಲೀಗ್‍ನ ಅಂಬಾಸಿಡರ್ ಆಗಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವಹಿಸಿದ್ದಾರೆ. ಮೇ 13ರಿಂದ 23ರವರೆಗೆ ಪುಣೆಯಲ್ಲಿ, 24ರಿಂದ 29ರವರೆಗೆ ಮೈಸೂರಿನಲ್ಲಿ 2ನೇ ಹಂತ ಲೀಗ್ ನಡೆಯಲಿದೆ. ಈ ಎರಡು ತಂಡದಲ್ಲಿ ಗೆದ್ದವರು ಬೆಂಗಳೂರಿನಲ್ಲಿ ಫೈನಲ್ ಪಂದ್ಯ ಆಡಲಿದ್ದಾರೆ. ಗೆದ್ದ ಮೊದಲ ತಂಡಕ್ಕೆ 1.25 ಕೋಟಿ ರೂ. ನಗದು ಬಹುಮಾನ ಸಿಗಲಿದೆ. ದ್ವೀತಿಯ 75 ಲಕ್ಷ ರೂ., ತೃತೀಯ 50 ಲಕ್ಷ ರೂ. ಹಾಗೂ ನಾಲ್ಕನೇ ಬಹುಮಾನ 25 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಮಹಿಳಾ ತಂಡಗಳು ಭಾಗಿ: ಲೀಗ್‍ನಲ್ಲಿ 4 ಮಹಿಳಾ ತಂಡಗಳು ಭಾಗವಹಿಸಲಿವೆ. ಈ ಲೀಗ್‍ನಲ್ಲಿ ಉತ್ತಮ ಪ್ರೋತ್ಸಾಹ ದೊರೆತರೆ, ಮುಂದಿನ ನವೆಂಬರ್ ತಿಂಗಳಲ್ಲಿ ಮಹಿಳಾ ಲೀಗ್ ನಡೆಸಲಾಗುವುದು. ಈ ಲೀಗ್‍ನಲ್ಲಿ ಒಂದು ಪಂದ್ಯವಾಡಿದ ಮಹಿಳಾ ಕ್ರೀಡಾಪಟುವಿಗೆ 50 ಸಾವಿರ ರೂ. ಸಂಭಾವನೆ ನೀಡಲಾಗುವುದು ಎಂದು ತಿಳಿಸಿದರು.