ಮೈಸೂರಿನಲ್ಲಿ ಗುಜರಾತ್ ಕಲೆಯ ಮೆರವಣಿಗೆ...

ಮೈಸೂರಿನಲ್ಲಿ ಗುಜರಾತ್ ಕಲೆಯ ಮೆರವಣಿಗೆ...

LK   ¦    Jul 10, 2019 04:10:47 PM (IST)
ಮೈಸೂರಿನಲ್ಲಿ ಗುಜರಾತ್ ಕಲೆಯ ಮೆರವಣಿಗೆ...

ಮೈಸೂರು: ಕಾಲಿಟ್ಟಾಗಲೇ ಆಕರ್ಷಿಸುವ ವಾತಾವರಣ, ಶಿಲಾಕೃತಿಗಳು, ತ್ರಿಡಿ ಚಿತ್ರಗಳು, ಬಗೆ ಬಗೆಯ ಅಲಂಕಾರಿಕ ವಸ್ತುಗಳು, ವಿವಿಧ ಬಗೆಯ ಸಾಂಸ್ಕೃತಿಕ ಸೊಬಗಿನ ಅನಾವರಣ, ಕರಕುಶಲ ವಸ್ತುಗಳ ಆಗರ.. ಇದೆಲ್ಲವೂ ಮೈಸೂರಿನ ಹೆಬ್ಬಾಳು ಕೈಗಾರಿಕಾ ವಲಯದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕಂಡು ಬರುತ್ತಿರುವ ಗುಜರಾತ್ ಕರಕುಶಲ ಮೇಳದ ದೃಶ್ಯಗಳು.

ಗುಜರಾತ್ ಸರ್ಕಾರದ ಇಂಡೆಕ್ಸ್ಟ್‍ಸಿ ಸಹಯೋಗದಲ್ಲಿ ಆರಂಭಗೊಂಡಿರುವ ಗುಜರಾತ್ ಕರಕುಶಲ ಮೇಳ ಎಲ್ಲರ ಗಮನಸೆಳೆದಿದೆ. ಗುಜರಾತ್‍ನ ಕುಶಲಕರ್ಮಿಗಳನ್ನು ಒಂದೆಡೆ ಸೇರಿಸಿ ಅವರ ಕುಶಲ ಕಲೆಗಳನ್ನು ಪ್ರದರ್ಶಿಸಲು ನೇರವಾಗಿ ಗ್ರಾಹಕರಿಗೂ ಕುಶಲ ಕಲೆಗಳ ರುಚಿ ಸವಿಯುವಂತೆ ಮಾಡುತ್ತಿರುವ ಅರ್ಬನ್ ಹಾತ್‍ನ ಈ ಮೇಳದಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ಕಲಾ ಶ್ರೀಮಂತಿಕೆಯೂ ಪ್ರದರ್ಶನವಾಗುತ್ತಿದೆ.

ಈ ಬಾರಿಯ ಮೇಳವು ಈ ಹಿಂದೆ ನಡೆದ ಮೇಳಗಳಿಗಿಂತ ಭಿನ್ನವಾಗಿದೆ. ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂಥ, ಕಣ್ಮನ ಸೆಳೆಯುವ ವಸ್ತುಗಳು ಇವೆ. ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ ಸುಮಾರು 60 ಕುಶಲಕರ್ಮಿಗಳು ಮೇಳದಲ್ಲಿ ಮಳಿಗೆಗಳಲ್ಲಿ ಕಲಾಸಕ್ತರನ್ನು ಸೆಳೆಯುತ್ತಿದ್ದಾರೆ. ಅವರೇ ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್‍ಗಳು, ಟವಲ್‍ಗಳು, ಕುಶನ್ ಕವರ್‍ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‍ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಅನಾವರಣಗೊಳಿಸಲಾಗಿದೆ. ಮೈಸೂರು ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಆಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ, ಕಡಿಮೆ ಬೆಲೆಗೆ ದೊರೆಯುತ್ತಿವೆ.

ಹುಟ್ಟಿನಿಂದ ಜೀವನದ ಅಂತ್ಯದವರೆಗೂ ಬದುಕಿನ ಜತೆಯಾಗುವ ಬಿದಿರಿನಿಂದ ಏನೆಲ್ಲ ತಯಾರಿಸಬಹುದು ಎಂಬುದಕ್ಕೆ ಈ ಮೇಳ ಒಂದು ಉದಾಹರಣೆಯಾಗಿದೆ. ಸಣ್ಣ ಬುಟ್ಟಿಗಳು, ಹೂದಾನಿಗಳು, ಅಲಂಕಾರಿಕ ವಸ್ತುಗಳ ಸಂಗ್ರಹವಂತೂ ಕುತೂಹಲ ಮೂಡಿಸುತ್ತದೆ. ಇನ್ನು ಮೇಳದಲ್ಲಿ ಭಾಗವಹಿಸುತ್ತಿರುವ ಹಲವು ಕಲಾವಿದರಲ್ಲಿ ಮನಸೆಳೆಯುವ ಚಿತ್ರಕಲಾಕೃತಿಯನ್ನು ರಚಿಸುವ ಕಲಾವಿದ ಉಗುರಿನಿಂದಲೇ ಬೆರಗುಗೊಳಿಸುತ್ತಾರೆ. ಯಾವುದೇ ಬಗೆಯ ಚಿತ್ರಗಳನ್ನು ಕ್ಷಣಮಾತ್ರದಲ್ಲೇ ರಚಿಸಿ ನಮ್ಮನ್ನು ಖುಷಿ ಪಡಿಸುತ್ತಿರುವುದು ಗಮನಾರ್ಹವಾಗಿದೆ.

ಚರ್ಮದ ಚಪ್ಪಲಿಗಳು, ಆಲಂಕಾರಿಕ ವಸ್ತುಗಳು, ಬಾಗಿಲಿನ ಅಲಂಕಾರ ಹೆಚ್ಚಿಸುವ ಪರಿಕರಗಳು, ದೇವರಕೋಣೆಯಲ್ಲಿ ಇಡಬಹುದಾದ ವಸ್ತುಗಳು, ವಿವಿಧ ಮಣಿಗಳಿಂದ ಹರಳುಗಳಿಂದ ಇಲ್ಲಿವೆ. ಅಲ್ಲದೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪರೇಟ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವರಿಗೆ ಹಾಗೂ ಆಸಕ್ತರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ನೀಡುತ್ತಿದ್ದಾರೆ. ವರ್ಲಿ ಕಲೆ, ಗ್ರೀಟಿಂಗ್ ಕಾರ್ಡ್ ತಯಾರಿ, ಸಮೂಹ ನೃತ್ಯ ಸ್ಪರ್ಧೆಗಳು ಕೂಡ ಕರಕುಶಲ ಮೇಳಕ್ಕೆ ಮೆರಗು ತಂದಿದೆ.

More Images