ಸಾಲ ಕೊಡಿಸುವ ವಿಚಾರದಲ್ಲಿ ಮಹಿಳೆಗೆ ವಂಚನೆ: ಕಾಂಗ್ರೆಸ್ ಮುಖಂಡನ ವಿರುದ್ದ ದೂರು

ಸಾಲ ಕೊಡಿಸುವ ವಿಚಾರದಲ್ಲಿ ಮಹಿಳೆಗೆ ವಂಚನೆ: ಕಾಂಗ್ರೆಸ್ ಮುಖಂಡನ ವಿರುದ್ದ ದೂರು

NB   ¦    Aug 11, 2017 04:29:43 PM (IST)
ಸಾಲ ಕೊಡಿಸುವ ವಿಚಾರದಲ್ಲಿ ಮಹಿಳೆಗೆ ವಂಚನೆ: ಕಾಂಗ್ರೆಸ್ ಮುಖಂಡನ ವಿರುದ್ದ ದೂರು

ಮೈಸೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಕೊಡಿಸುವ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ್ದು, ಈ ಕುರಿತು ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಯಕ್ ವಿರುದ್ದ ಆರೋಪ ಕೇಳಿ ಬಂದಿದೆ. ವಂಚನೆಗೊಳಗಾದ ಮಹಿಳೆ ಶ್ರೀರಾಂಪುರ ಬಡಾವಣೆಯ ನಿವಾಸಿ ಕವಿತಾ ಸೆಲ್ವಂ ಬಸವರಾಜ ನಾಯಕ್ ವಿರುದ್ದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕವಿತಾ ಸೆಲ್ವಂ ಹೆಸರಿನಲ್ಲಿ ಬಸವರಾಜ ನಾಯಕ್ 10 ಲಕ್ಷ ರೂ. ಸಾಲ ಮಂಜೂರು ಮಾಡಿಸಿದ್ದಾರೆ. ಮಂಜೂರಾದ ವಿಚಾರ ಕವಿತಾ ಸೆಲ್ವಂ ಅವರಿಗೆ ತಿಳಿಸದೆ ತಾನೇ ಆಕೆಯ ಹೆಸರಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ತೆಗೆದಿದ್ದಾರೆ.
ನಂತರ ಕವಿತಾ ಸೆಲ್ವಂ ಹೆಸರಿನಲ್ಲಿ ಬಂದ 10 ಲಕ್ಷ ರೂ. ಹಣವನ್ನ ಡ್ರಾ ಮಾಡಿದ ಬಸವರಾಜ ನಾಯಕ್ ಕಂತು ಪಾವತಿಸಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ವ್ಯವಸ್ಥಾಪಕರಾದ ಶಶಿಕಲಾಭಾಯಿ ಸಹಕಾರದಿಂದ ಬಸವರಾಜ ನಾಯಕ್ ಖಾತೆ ತೆರೆದು ಕವಿತಾ ಡ್ರೆಸ್ ಮೇಕರ್ಸ್ ಎಂಬ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿದ್ದಾರೆ. ಶಶಿಕಲಾ ಭಾಯಿ ವರ್ಗಾವಣೆಯಾದ ನಂತರ ಬಂದ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಕಂತು ಪಾವತಿಸುವಂತೆ ಕವಿತಾ ಸೆಲ್ವಂ ಗೆ ಸೂಚನೆ ನೀಡಿದ್ದಾರೆ. ಆಗಷ್ಟೇ ಕವಿತಾ ಸೆಲ್ವಂ ಹೆಸರಿನಲ್ಲಿ ಬಸವರಾಜ ನಾಯಕ್ ಖಾತೆ ತೆರೆದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಬಸವರಾಜ ನಾಯಕ್ ಹಾಗೂ ಶಶಿಕಲಾ ಭಾಯಿ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಕವಿತಾ ಸೆಲ್ವಂ ದೂರು ನೀಡಿದ್ದಾರೆ.ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಹಣವನ್ನ ಬ್ಯಾಂಕಿಗೆ ಪಾವತಿಸಿ ದೂರು ಹಿಂದಕ್ಕೆ ಪಡೆಯುವಂತೆ ಕಾಂಗ್ರೆಸ್ ಮುಖಂಡ. ಬಸವರಾಜ್ ನಾಯಕ್ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ ಮಹಿಳೆ ಕವಿತಾ ಸೆಲ್ವಂ ಅನಗತ್ಯವಾಗಿ ಪಜೀತಿಗೆ ಸಿಲುಕಿದ್ದಾರೆ.