ಚಾಮರಾಜನಗರದಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆಗೆ ಯತ್ನ?

ಚಾಮರಾಜನಗರದಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆಗೆ ಯತ್ನ?

LK   ¦    Dec 05, 2018 05:55:11 PM (IST)
ಚಾಮರಾಜನಗರದಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆಗೆ ಯತ್ನ?

ಚಾಮರಾಜನಗರ: ಅಮಾನತ್ತಿನಲ್ಲಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಚಾಲಕನಾಗಿದ್ದ ಹೆಡ್ ಕಾನ್ ಸ್ಟೇಬಲ್ ಎಂ.ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಸೇವೆಯಿಂದ ಅಮಾನತ್ತುಗೊಂಡಿದ್ದರು. ಅಲ್ಲದೆ, ಅಮಾನತ್ತು ರದ್ದು ಪಡಿಸುವಂತೆ ಹಲವಾರು ಬಾರಿ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕುಮಾರಸ್ವಾಮಿಯ ಅಮಾನತ್ತು ರದ್ದು ಪಡಿಸಲು ಮುಂದಾಗಲಿಲ್ಲ. ಇದರಿಂದ ಬೇಸತ್ತ ಕುಮಾರಸ್ವಾಮಿ ರಾಮಸಮುದ್ರದಲ್ಲಿನ ತಮ್ಮ ನಿವಾಸದಲ್ಲಿ ಮದ್ಯದೊಂದಿಗೆ ವಿಷ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸುವ ಮುನ್ನಾ ಕುಮಾರಸ್ವಾಮಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್ ಪೆಕ್ಟರ್ ಚನ್ನನಾಯಕರಿಗೆ ದೂರವಾಣಿ ಮಾಡಿ ತಾನು ನೊಂದಿದ್ದು, ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ತನಗೆ ದೂರವಾಣಿಯಲ್ಲಿ ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದನ್ನು ಕೇಳಿದ ಸಬ್ ಇನ್ಸ್ ಪೆಕ್ಟರ್ ಚನ್ನನಾಯಕರು ಕುಮಾರಸ್ವಾಮಿಯವರ ನಿವಾಸಕ್ಕೆ ತೆರಳಿ ನೋಡಿದಾಗ ಕುಮಾರಸ್ವಾಮಿ ಅಸ್ವಸ್ಥರಾಗಿದ್ದನ್ನು ಕಂಡು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಾರಸ್ವಾಮಿಯವರನ್ನು ಕರ್ತವ್ಯ ಲೋಪ ಆರೋಪದ ಮೇಲೆ ಕೆಲ ದಿನಗಳ ಹಿಂದೆ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್ ಪೆಕ್ಟರ್ ಸೋಮಣ್ಣ ಅಮಾನತ್ತು ಆದೇಶ ಹಿಂಪಡೆಯಲು ನಿರಾಕರಣೆ ಮಾಡಿದ್ದರಿಂದ ಕುಮಾರಸ್ವಾಮಿ ಆತ್ಮಹತ್ಯೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.