ನಿಫಾ ವೈರಸ್ ತಡೆಗೆ ಗಡಿಭಾಗದಲ್ಲಿ ತಪಾಸಣೆ

ನಿಫಾ ವೈರಸ್ ತಡೆಗೆ ಗಡಿಭಾಗದಲ್ಲಿ ತಪಾಸಣೆ

LK   ¦    Jun 12, 2019 05:10:38 PM (IST)
ನಿಫಾ ವೈರಸ್ ತಡೆಗೆ ಗಡಿಭಾಗದಲ್ಲಿ ತಪಾಸಣೆ

ಮೈಸೂರು: ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ರಾಜ್ಯದತ್ತ ಹರಡಬಹುದೆಂಬ ಭಯ ಎಲ್ಲರನ್ನು ಕಾಡುತ್ತಿದ್ದು, ಹೀಗಾಗಿಯೇ ಗಡಿಭಾಗದಲ್ಲಿ ನಿಗಾ ವಹಿಸಿರುವ ಆರೋಗ್ಯ ಇಲಾಖೆ ಬಸ್ ಪ್ರಯಾಣಿಕರು, ವಾಹನ ಸವಾರರು, ಪ್ರವಾಸಿಗರ ತಪಾಸಣೆ ನಡೆಸುತ್ತಿದ್ದಾರೆ.

ಇದೀಗ ಕೇರಳದಿಂದ ರಾಜ್ಯಕ್ಕೆ ಬರುವ ವಾಹನಗಳನ್ನು ರಾಜ್ಯದ ಗಡಿ ಭಾಗವಾದ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಹಾಗೂ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ವೆಂಕಟೇಶ್, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಟಿ. ರವಿಕುಮಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ತಪಾಸಣೆ ನಡೆಸಲಾಗುತ್ತಿದ್ದಾರೆ.

ಕೇರಳ ಮತ್ತು ಮೈಸೂರು ನಡುವೆ ಹಲವು ರೀತಿಯ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಪ್ರತಿದಿನವೂ ಸಾವಿರಾರು ಮಂದಿ ಬಂದು ಹೋಗುತ್ತಿರುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದ್ದು ಹೀಗಾಗಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇನ್ನೊಂದೆಡೆ ಕೇರಳದಿಂದ ಬರುವ ಆಹಾರ ಪದಾರ್ಥಗಳನ್ನು ಉಪಯೋಗಿಸಲು ಜನ ಭಯ ಪಡುತ್ತಿದ್ದಾರೆ.

ಈ ಕುರಿತಂತೆ ಮಾತನಾಡಿದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ವೆಂಕಟೇಶ್ ಅವರು, ಕೇರಳ ರಾಜ್ಯದಲ್ಲಿ ಹರಡಿರುವ ನಿಫಾ ವೈರಸ್ ನಂತಹ ರೋಗಗಳು ರಾಜ್ಯದಲ್ಲಿ ಹರಡದಂತೆ ರಾಜ್ಯದ ಎಲ್ಲಾ ಗಡಿ ಭಾಗಗಳಲ್ಲಿ ತಪಾಸಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರ ವಹಿಸಿದ್ದು, ಕೇರಳದಿಂದ ಬರುವ ಪ್ರತಿಯೊಬ್ಬರನ್ನು ಗಡಿಭಾಗದಲ್ಲಿ ತಪಾಸಣೆ ಮಾಡಿ ಬಿಡಲಾಗುತ್ತಿರುವುದರಿಂದ ಯಾವುದೇ ರೀತಿಯ ಭಯಪಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

More Images