ದಸರಾ ಗಜಪಡೆಗೆ ಭಾರದ ತಾಲೀಮು ಆರಂಭ

ದಸರಾ ಗಜಪಡೆಗೆ ಭಾರದ ತಾಲೀಮು ಆರಂಭ

LK   ¦    Sep 14, 2018 07:13:05 PM (IST)
ದಸರಾ ಗಜಪಡೆಗೆ ಭಾರದ ತಾಲೀಮು ಆರಂಭ

ಮೈಸೂರು: ನಾಡಹಬ್ಬ ದಸರೆಯ ಆಕರ್ಷಕ ಜಂಬೂಸವಾರಿಯಲ್ಲಿ ಸಾಗುವ ದಸರಾ ಗಜಪಡೆಯ ಮೊದಲ ತಂಡಕ್ಕೆ ಭಾರ ಹೊರುವ ತಾಲೀಮು ಆರಂಭವಾಗಿದೆ.

ಇದುವರೆಗೆ ಅರ್ಜುನ ನೇತೃತ್ವದ ಗಜಪಡೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಾವುದೇ ಭಾರವಿಲ್ಲದೆ ಹಾಗೆಯೇ ಸಾಗಿ ಬರುತ್ತಿದ್ದವಾದರೂ ಶುಕ್ರವಾರದಿಂದ ಅರ್ಜುನನಿಗೆ ಮರಳಿನ ಮೂಟೆಗಳನ್ನು ಹೊರಿಸಿ ತಾಲೀಮು ಆರಂಭಿಸಲಾಗಿದೆ.

ಅಂಬಾರಿ ಹೊರುವ ಅರ್ಜುನ ಸೇರಿದಂತೆ ಆನೆಗಳಿಗೆ ನಿಧಾನವಾಗಿ ಭಾರವನ್ನು ಹೆಚ್ಚಿಸುವ ಮೂಲಕ ಭಾರ ಹೊರುವ ಅಭ್ಯಾಸ ಮಾಡಿಸಲಾಗುತ್ತಿದೆ. ಉಸುಕಿನ ಮೂಟೆಯನ್ನು ಬೆನ್ನಿಗೆ ಕಟ್ಟಿ ಬಳಿಕ ಅದರ ಮೇಲೆ ಮರಳಿನ ಮೂಟೆಗಳನ್ನು ಆನೆಗಳ ಬೆನ್ನಿನ ಮೇಲೆ ಹೊರಿಸಿ ಭಾರವನ್ನು ಅವುಗಳ ಅನುಭವಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಶುಕ್ರವಾರ ಅರ್ಜುನ ಭಾರ ಹೊತ್ತು ನಡೆದರೆ ಉಳಿದಂತೆ ಆತನ ಹಿಂದೆ ಇತರ ಆನೆಗಳು ಹಜ್ಜೆ ಹಾಕಿದವು. ರಾಜ ಮಾರ್ಗದಲ್ಲಿ ನಡೆದ ಗಜಪಡೆಗಳು ಬನ್ನಿಮಂಟಪದವರೆಗಿನ ಸುಮಾರು ಐದು ಕಿ.ಮೀ.ನಷ್ಟು ದೂರವನ್ನು ಕ್ರಮಿಸಿ ಬಂದವು. ಇನ್ನು ಮುಂದೆ ಗಜಪಡೆಗಳು ತಾಲೀಮು ಕಠಿಣವಾಗಲಿದ್ದು ದಿನದಿಂದ ದಿನಕ್ಕೆ ಅಂಬಾರಿ ಹೊರುವ ಅರ್ಜುನನ ಬೆನ್ನಿನ ಮೇಲೆ ಭಾರವೂ ಹೆಚ್ಚಾಗಲಿದೆ. ಜತೆಗೆ ಎರಡನೇ ತಂಡದ ಗಜಪಡೆಗಳು ಇವುಗಳೊಂದಿಗೆ ಸೇರಿಕೊಳ್ಳಲಿವೆ. ಶುಕ್ರವಾರ ಅರ್ಜುನ ಮುನ್ನೂರು ಕೆಜಿ ತೂಕದ ಮರಳ ಮೂಟೆ ಹೊತ್ತು ನಡೆದಿದೆ ತಾಲೀಮು ನಡೆಸಲಾಗಿದೆ.

ಈ ಕುರಿತು ಮಾತನಾಡಿದ ಆರೋಗ್ಯಾಧಿಕಾರಿ ಡಾ.ನಾಗರಾಜ್ ಅವರು, ಮರಳಮೂಟೆ ತಾಲೀಮು ಆರಂಭಿಸಿದ್ದು, ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಿದ್ದು, ಮುನ್ನೂರು ಕೆಜಿ ತೂಕದ ಮರಳಮೂಟೆಯನ್ನು ಹೊತ್ತು ಕ್ಯಾಪ್ಟನ್ ಅರ್ಜುನ ಸಾಗಿದ್ದಾನೆ. ಸುಮಾರು ಐದು ಕಿಲೋಮೀಟರ್ ದೂರ ಹೊತ್ತು ಸಾಗಿದ್ದಾನೆ. ನಾಡಹಬ್ಬ ದಸರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ಹೊರುವ ಮುನ್ನ ಅರ್ಜುನನಿಗೆ ತಾಲೀಮು ನಡೆಸಲಾಗುತ್ತಿದೆ. ಅಂಬಾರಿ ಹೊರುವ ಅರ್ಜುನನಿಗೆ ಸ್ವಲ್ಪ, ಸ್ವಲ್ಪವೇ ಭಾರ ಹೆಚ್ಚಿಸಲಾಗುವುದು.

ಆನೆಗಳ ಹಿತ ಕಾಪಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಸಿಬ್ಬಂದಿ ಮ್ಯಾಗ್ನೆಟ್ ಟ್ರ್ಯಾಲಿ ಬಳಸುತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಕಬ್ಬಿಣದ ತುಂಡು ಕಾಲಿಗೆ ಚುಚ್ಚದಂತೆ ಕ್ರಮ ಕೈಗೊಳ್ಳಲಾಗಿದ್ದು, ಮ್ಯಾಗ್ನೆಟ್ ಟ್ರ್ಯಾಲಿ ಕಬ್ಬಿಣದ ಮೊಳೆ, ತುಂಡುಗಳನ್ನು ಹಿಡಿದಿಟ್ಟುಕೊಳ್ಳಲಿದೆ. ಆನೆಗಳು ಸಾಗುವ ಹಾದಿಯಲ್ಲಿ ಟ್ರ್ಯಾಲಿ ತೆರಳಲಿದ್ದು, ಆನೆಗಳ ಮುಂದೆ ಸಾಗಿ ಕಬ್ಬಿಣವನ್ನು ಹೆಕ್ಕಿ ತೆಗೆಯಲಿದೆ ಎಂದು ಇದೇ ವೇಳೆ ಹೇಳಿದರು.

ಮರಳು ತಾಲೀಮು ನಡೆಸುವ ಮುನ್ನ ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲಿದಿರುತ್ತಾರೆ. ಇದರಲ್ಲಿ ತೆಂಗಿನ ನಾರು ತುಂಬಿಸಲಾಗಿರುತ್ತದೆ.

ಅದರ ಮೆತ್ತನೆಯ ಹೊದಿಕೆ ಮೇಲೆ ಗಾದಿ ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು 300 ಕೆ.ಜಿ ತೂಕ ಇರುತ್ತದೆ. ಈ ದೊಡ್ಡ ಗೋಣಿ ಚೀಲದಲ್ಲಿ ತುಂಬಿರುವುದು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲು. ಇದನ್ನು ಸುಮಾರು ಸುಮಾರು 80 ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ಬಟ್ಟೆಯನ್ನು ಹೊದಿಸಲಾಗುತ್ತದೆ. ಅದಕ್ಕೆ ಮಾವುತರ ಭಾಷೆಯಲ್ಲಿ ಛಾಪು ಎಂದು ಹೇಳಲಾಗುತ್ತದೆ ಇದು ಸಹ ತೆಂಗಿನ ನಾರನ್ನು ತುಂಬಿ ಹತ್ತಿ ಬಟ್ಟೆಯಿಂದ ಹೊಲೆದದ್ದೇ ಆಗಿದೆ.

ಚಾಪಿನ ಮೇಲೆ ತೊಟ್ಟಿಲ ರೀತಿಯ ದೊಡ್ಡ ವಸ್ತುವನ್ನು ಇಡಲಾಗುತ್ತೆ. ಇದಕ್ಕೆ ಮಾವುತರು ಕರೆಯುವುದು ಚಾರ್ಜಾಮಾ ಎಂದು.

ಈ ಮೂರನ್ನು ಸೇರಿಸಿ ಆನೆಯ ಹಿಂಭಾಗದಿಂದ ಧುಮುಚಿ ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ. ಚಾರ್ಜಾಮಾದ ಮೇಲೆ ಸುಮಾರು 75 ರಿಂದ 80 ಕೆಜಿ. ತೂಕವಿರುವ ಮರಳಿನ ಮೂಟೆಗಳನ್ನು ಹೊರಿಸಲಾಗುತ್ತದೆ. ಇದು ದಿನಕಳೆದಂತೆ ಹೆಚ್ಚುತ್ತಾ ಹೋಗುತ್ತದೆ.