ಅಕ್ಕಿ ವ್ಯಾಪಾರಿ ಹತ್ಯೆ ಪ್ರಕರಣ: ನಗರಸಭೆ ಮಾಜಿ ಸದಸ್ಯರಿಬ್ಬರ ಸಹಿತ 9 ಮಂದಿಗೆ ಜೀವಾವಧಿ ಶಿಕ್ಷೆ

ಅಕ್ಕಿ ವ್ಯಾಪಾರಿ ಹತ್ಯೆ ಪ್ರಕರಣ: ನಗರಸಭೆ ಮಾಜಿ ಸದಸ್ಯರಿಬ್ಬರ ಸಹಿತ 9 ಮಂದಿಗೆ ಜೀವಾವಧಿ ಶಿಕ್ಷೆ

LK   ¦    Jan 10, 2019 06:07:30 PM (IST)
ಅಕ್ಕಿ ವ್ಯಾಪಾರಿ ಹತ್ಯೆ ಪ್ರಕರಣ: ನಗರಸಭೆ ಮಾಜಿ ಸದಸ್ಯರಿಬ್ಬರ ಸಹಿತ 9 ಮಂದಿಗೆ ಜೀವಾವಧಿ ಶಿಕ್ಷೆ

ಮಂಡ್ಯ: ಅಕ್ಕಿ ವ್ಯಾಪಾರಿ ರಫಿವುಲ್ಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ಇಬ್ಬರು ಮಾಜಿ ಸದಸ್ಯರೂ ಸೇರಿ 9 ಮಂದಿ ಆರೋಪಿಗಳಿಗೆ ಮಂಡ್ಯದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನಗರದ ಗಾಂಧಿನಗರ ನಿವಾಸಿ, ಅಕ್ಕಿ ಅಂಗಡಿ ಮಾಲೀಕ ರಫಿವುಲ್ಲಾ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ ಎಲ್ಲಾ 9 ಮಂದಿ ಆರೋಪಿಗಳಿಗೆ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಗಾಂಧಿನಗರದ ನಿವಾಸಿಗಳಾದ ಮುಜಾಹಿದ್ ಅಹಮದ್, ಫಿರ್ದೋಸ್ ಅಹಮದ್, ಮತೀಬ್ ಅಹಮದ್, ಇರ್ಷಾದ್ ಆಲಿಖಾನ್, ಇಮ್ರಾನ್ ಪಾಷ, ಮಹಮದ್ ಅಲಿ, ತೌಸಿಕ್ ಅಹಮದ್, ನಗರಸಭೆ ಮಾಜಿ ಸದಸ್ಯರಾದ ಮುಜಾಹಿದ್ ಪಾಷ ಹಾಗೂ ಅಫ್ರೋಜ್ ಅಹ್ಮದ್ ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.

ಮಂಡ್ಯದ ಮುಸ್ಲಿಂ ಸಮುದಾಯದಲ್ಲಿ ಪ್ರಾಬಲ್ಯದ ಅಸ್ತಿತ್ವಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಜಫ್ರುಲ್ಲಾಖಾನ್ ಏಳಿಗೆಗೆ ಅಕ್ಕಿ ವ್ಯಾಪಾರಿ ರಫಿವುಲ್ಲಾ ಅಡ್ಡಗಾಲಾಗಿದ್ದನು. ಜಾಗದ ವಿಚಾರವಾಗಿ ವಿವಾದ ಏರ್ಪಟ್ಟು ವಿಕೋಪಕ್ಕೆ ತಿರುಗಿತ್ತು.

2010ನೇ ಜ.18ರಂದು ಗಾಂಧಿನಗರದ ಪಂಪ್‍ಹೌಸ್ ರಸ್ತೆಯ ತನ್ನ ಅಂಗಡಿಗೆ ಬೆಳಗ್ಗೆ 10ರ ವೇಳೆಯಲ್ಲಿ ರಫಿವುಲ್ಲಾ ಬಂದು ಬಾಗಿಲು ತೆರೆಯುತ್ತಿದ್ದಾಗ ದುಷ್ಕರ್ಮಿಗಳ ತಂಡ ಹೊಂಚು ಹಾಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು.

ತೀವ್ರವಾಗಿ ಗಾಯಗೊಂಡ ರಫಿವುಲ್ಲಾ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ ಸ್ವಲ್ಪ ಹೊತ್ತಿನಲ್ಲಿಯೇ ಕಾರಸವಾಡಿ ರಸ್ತೆಯ ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನಂತರ ನಡೆದ ವಿಚಾರಣೆಯಲ್ಲಿ ಹತ್ಯೆಯ ಬಗ್ಗೆ ಸ್ಪೋಟಕ ಮಾಹಿತಿ ಹೊರಬಿದ್ದಿತು.

ಹಾಡಹಗಲೇ ನಡೆದ ಹತ್ಯೆ ನಗರದ ಜನರನ್ನು ಬೆಚ್ಚಿ ಬೀಳಿಸಿತ್ತು. ಅದರಲ್ಲೂ ಮುಸ್ಲಿಂ ಸಮುದಾಯದ ವಲಯದಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿತ್ತು. ಈ ಹತ್ಯೆಯ ಹಿಂದೆ ಹಾಲಿ ಜಾ.ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಕೈವಾಡ ಇರುವ ಬಗ್ಗೆ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಪೊಲೀಸರು ಜಫ್ರುಲ್ಲಾ ಖಾನ್‍ರನ್ನು ಪ್ರಮುಖ ಆರೋಪಿಯನ್ನಾಗಿಸಿದ್ದರು. ತರುವಾಯ ಅವರು ಹೈಕೋರ್ಟ್ ಮೆಟ್ಟಿಲೇರಿ ಆರೋಪ ಪಟ್ಟಿಯಿಂದ ತಮ್ಮ ಹೆಸರನ್ನು ಬಿಡಿಸಿದ್ದರು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಹಿದ್ ಅಹಮದ್, ಫಿರ್ದೋಸ್ ಅಹಮದ್, ಮತೀಬ್ ಅಹಮದ್, ಇರ್ಷಾದ್ ಆಲಿಖಾನ್, ಇಮ್ರಾನ್ ಪಾಷ, ಮಹಮದ್ ಅಲಿ, ತೌಸಿಕ್ ಅಹಮದ್, ನಗರಸಭೆ ಮಾಜಿ ಸದಸ್ಯರಾದ ಮುಜಾಹಿದ್ ಪಾಷ ಹಾಗೂ ಅಫ್ರೋಜ್ ಅಹ್ಮದ್ ಅವರುಗಳ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನಂತರದ ದಿನಗಳಲ್ಲಿ ಆರೋಪಿಗಳೆಲ್ಲರೂ ಜಾಮೀನು ಪಡೆದು ಹೊರಬಂದಿದ್ದರು. ಅಂದಿನಿಂದ ಸುದೀರ್ಘ 8 ವರ್ಷಗಳ ಕಾಲ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 9 ಮಂದಿ ಆಪಾದಿತರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ತೀರ್ಪು ನೀಡಿದ್ದಾರೆ.