ವಿದ್ಯುತ್ ಜಾಲ ಪುನರ್ ಸ್ಥಾಪನೆಗೆ ಒಡಿಶಾಗೆ ಕರ್ನಾಟಕ ತಂಡ

ವಿದ್ಯುತ್ ಜಾಲ ಪುನರ್ ಸ್ಥಾಪನೆಗೆ ಒಡಿಶಾಗೆ ಕರ್ನಾಟಕ ತಂಡ

LK   ¦    May 22, 2019 04:30:42 PM (IST)
ವಿದ್ಯುತ್ ಜಾಲ ಪುನರ್ ಸ್ಥಾಪನೆಗೆ ಒಡಿಶಾಗೆ ಕರ್ನಾಟಕ ತಂಡ

ಮೈಸೂರು: ಒಡಿಶಾದಲ್ಲಿ ಫನಿ ಚಂಡಮಾರುತದ ಅತೀ ವೃಷ್ಟಿಯಿಂದ ಭಾರಿ ಹಾನಿಗೊಳಗಾದ ವಿದ್ಯುತ್ ಜಾಲ ಪುನರ್ ಸ್ಥಾಪನೆ ಹಾಗೂ ವಿದ್ಯುತ್ ಸರಬರಾಜನ್ನು ಪುನರ್ ಚಾಲನೆ ಮಾಡುವ ಕಾರ್ಯಕ್ಕೆ ನೆರವಾಗಲು ಚಾವಿಸನಿನಿ ವತಿಯಿಂದ ನುರಿತ 204 ಸಿಬ್ಬಂದಿಗಳನ್ನೊಳಗೊಂಡ 18 ತಂಡಗಳನ್ನು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಭುವನೇಶ್ವರಕ್ಕೆ ಕಳುಹಿಸಲಾಗಿದೆ.

ಚಾವಿಸನಿನಿ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಿಂದ ಒಟ್ಟಾರೆಯಾಗಿ 204 ನುರಿತ ನಿರ್ವಹಣಾ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ಆಯ್ಕೆ ಮಾಡಿ ನಿಯೋಜಿಸಲಾಗಿದೆ. 10 ನಿರ್ವಹಣಾ ಸಿಬ್ಬಂದಿಯನ್ನು ಒಂದು ತಂಡವನ್ನಾಗಿ ಮಾಡಿ ಸದರಿ ತಂಡಕ್ಕೆ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ ತಂಡದ ಮೇಲುಸ್ಥುವಾರಿಗಾಗಿ ನೇಮಿಸಲಾಗಿದೆ. ತಂಡದ ಪ್ರತಿಯೊಬ್ಬ ಸದಸ್ಯನಿಗೆ ಈ ಕಾರ್ಯದಲ್ಲಿ ಉಪಯೋಗಕ್ಕೆ ಅನುವಾಗುವಂತೆ ಸೊಳ್ಳೆಪರದೆ, ಹೊದಿಕೆ, ಶಿರಸ್ತ್ರಾಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಇತರೇ ವಿದ್ಯುತ್ ಸುರಕ್ಷಾ ಸಾಮಗ್ರಿಗಳನ್ನು ಒಳಗೊಂಡಂತೆ ತುರ್ತು ನಿಧಿ ಒದಗಿಸಲಾಗಿದೆ.

ನಿಯೋಜಿಸಿರುವ ತಂಡಗಳು ಒಡಿಶಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಗತ್ಯ ವಿದ್ಯುತ್ ಸರಬರಾಜು ಪುನರ್ ಸ್ಥಾಪನೆಗೆ ಬೇಕಾದ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಿವೆ. ತಂಡವನ್ನು 15 ದಿನಗಳ ಅವಧಿಗೆ ನಿಯೋಜಿಸಲಾಗಿದೆ. ತಂಡ ತೆರಳಲು ಸಹಾಯವಾಗುವಂತೆ ಕರ್ನಾಟಕ ಸರ್ಕಾರ ಭಾರತೀಯ ರೈಲ್ವೇ ಪ್ರಾಧಿಕಾರದ ಸಹಯೋಗದೊಂದಿಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಭುವನೇಶ್ವರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿತ್ತು. ಚಾವಿಸನಿನಿ ತಂಡ ರಾಜ್ಯದ ಇತರೇ ಎಸ್ಕಾಂಗಳಾದ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂಗಳಿಂದಲೂ ನಿರ್ವಹಣಾ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಆ ಸಿಬ್ಬಂದಿಗಳು ಸಹಾ ಒಟ್ಟಾಗಿ ಇದೇ ರೈಲಿನಲ್ಲಿ ಪ್ರಯಾಣ ಬೆಳೆಸಿರುತ್ತಾರೆ. ತಂಡ ಈಗಾಗಲೇ ಭುವನೇಶ್ವರ ತಲುಪಿದ್ದು, ಒಡಿಶಾದ ಅಧಿಕಾರಿಗಳು ತಂಡವನ್ನು ಭುವನೇಶ್ವರ ರೈಲ್ವೇ ನಿಲ್ದಾಣದಲ್ಲಿ ಬರಮಾಡಿಕೊಂಡಿರುತ್ತಾರೆ. ನಿಯೋಜಿತ ತಂಡಗಳು ತತಕ್ಷಣದಿಂದಲೇ ಅಗತ್ಯ ತುರ್ತು ದುರಸ್ಥಿ ಕಾರ್ಯದಲ್ಲಿ ನಿರತರಾಗಿರುತ್ತದೆ.

ನಿಯೋಜಿತ ತಂಡವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಎನ್.ಗೋಪಾಲಕೃಷ್ಣ ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಬೀಳ್ಕೊಟ್ಟರು. ಈ ವೇಳೆ ಕವಿಪ್ರನಿನಿಯ ನಿರ್ದೇಶಕ (ಪ್ರಸರಣ) ಶಿವಕುಮಾರ್, ಚಾವಿಸನಿನಿಯ ನಿರ್ದೇಶಕ (ತಾಂತ್ರಿಕ) ಅಫ್ತಾಬ್ ಅಹಮದ್, ಮುಖ್ಯ ಆರ್ಥಿಕ ಅಧಿಕಾರಿ ಶಿವಣ್ಣ.ಎ, ಪ್ರಧಾನ ವ್ಯವಸ್ಥಾಪಕ (ಆ ಮತ್ತು ಮಾಸಂ) ಚಂದ್ರಶೇಖರ್.ಜಿ.ಎಲ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

More Images