ಶಿವರಾತ್ರಿಗೆ ಸಜ್ಜಾದ ಮೈಸೂರು: ಶಿವನಿಗೆ 11 ಕೆ.ಜಿ ತೂಕದ ಚಿನ್ನದ ಕೊಳಗ ಧಾರಣೆಗೆ ಸಿದ್ದತೆ

ಶಿವರಾತ್ರಿಗೆ ಸಜ್ಜಾದ ಮೈಸೂರು: ಶಿವನಿಗೆ 11 ಕೆ.ಜಿ ತೂಕದ ಚಿನ್ನದ ಕೊಳಗ ಧಾರಣೆಗೆ ಸಿದ್ದತೆ

MY   ¦    Feb 12, 2018 03:15:01 PM (IST)
ಶಿವರಾತ್ರಿಗೆ ಸಜ್ಜಾದ ಮೈಸೂರು: ಶಿವನಿಗೆ 11 ಕೆ.ಜಿ ತೂಕದ ಚಿನ್ನದ ಕೊಳಗ ಧಾರಣೆಗೆ ಸಿದ್ದತೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಶಿವರಾತ್ರಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ಜಗತ್ಪ್ರಸಿದ್ಧ ಅರಮನೆಯ ಆವರಣದಲ್ಲಿರುವ ಶಿವಾಲಯದಲ್ಲೂ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮೈಸೂರು ಮಹಾರಾಜರು ನಿರ್ಮಿಸಿಕೊಟ್ಟಿರುವ ಬಂಗಾರದ ಕೊಳಗವನ್ನು ತ್ರಿನೇಶ್ವರ ಸ್ವಾಮಿ ದೇವಾಲಯದ ಶಿವಲಿಂಗಕ್ಕೆ ಧಾರಣೆಗಾಗಿ ಖಜಾನೆಯಿಂದ ದೇವಸ್ಥಾನಕ್ಕೆ ಇಂದು ತರಲಾಯಿತು.

ಪ್ರತೀ ವರ್ಷ ಶಿವರಾತ್ರಿ ಹಬ್ಬದಂದು ಮುಂಜಾನೆಯಿಂದಲೇ ತ್ರಿನೇಶ್ವರ ದೇವಾಲಯಕ್ಕೆ ಸಹಸ್ರಾರು ಭಕ್ತರು ಹರಿದುಬಂದು ಶಿವನ ದರ್ಶನ ಪಡೆಯುತ್ತಾರೆ. ಮುಂಜಾನೆ 6 ಗಂಟೆಯಿಂದಲೇ ದೇವಾಲಯದಲ್ಲಿ ಶಿವನಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆರಂಭವಾಗುವ ಭಕ್ತರ ದರ್ಶನ ಮರುದಿನ ಬೆಳಿಗ್ಗೆವರೆಗೂ ನಿರಂತರವಾಗಿ ನಡೆಯುತ್ತದೆ. ಈ ದೇವಾಲಯದ ವಿಶೇಷತೆಯೆಂದರೆ ಶಿವಲಿಂಗಕ್ಕೆ ಬಂಗಾರದ ಮುಖವಾಡ ಧಾರಣೆ ಮಾಡೋದು. ಅದನ್ನು ವೀಕ್ಷಿಸುವ ಸಲುವಾಗಿಯೇ ಭಕ್ತರು ಕಾತರದಿಂದ ಕಾಯುತ್ತಾರೆ.

1953ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ತ್ರಿನೇಶ್ವರ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಹದೇಶ್ವರ ಬೆಟ್ಟದ ಮಹದೇಶ್ವರಸ್ವಾಮಿ ದೇವಾಲಯಗಳಿಗೆ ಈ ರೀತಿ ಚಿನ್ನದ ಮುಖವಾಡವನ್ನು ಮಕ್ಕಳ ಪ್ರೀತ್ಯರ್ಥವಾಗಿ ನೀಡಿದ್ದರು. ತ್ರಿನೇಶ್ವರಸ್ವಾಮಿ ದೇವಾಲಯದ ಶಿವನ ವಿಗ್ರಹಕ್ಕೆ ಧಾರಣೆ ಮಾಡಲಿರುವ ಚಿನ್ನದ ಕೊಳಗ 11 ಕೆಜಿ ತೂಕವಿದ್ದು, ಅದು ಸಂಪೂರ್ಣ ಬಂಗಾರದಿಂದ ನಿರ್ಮಿಸಲ್ಪಟ್ಟಿದೆ.

ಮಹಾನ್ ದೈವಭಕ್ತರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಅರಮನೆ ಆವರಣದಲ್ಲೇ ಇರುವ ದೇವಾಲಯಕ್ಕೆ ಪ್ರತಿನಿತ್ಯ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರಂತೆ. ಹಾಗಾಗಿ ಅವರು ಶಿವನಿಗೆ ಚಿನ್ನದ ಕೊಳಗವನ್ನು ದಾನವಾಗಿ ಕೊಟ್ಟಿದ್ದರು, ಹಿಂದೆಲ್ಲಾ ಪ್ರತಿನಿತ್ಯ ಈ ಕೊಳಗ ಧಾರಣೆ ಮಾಡಲಾಗುತ್ತಿತ್ತು. ಕಾಲಾನಂತರ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಮೇಲೆ ಶಿವರಾತ್ರಿ ಹಬ್ಬದಂದು ಮಾತ್ರ ಖಜಾನೆಯಿಂದ ಹೊರತಂದು ಶಿವನಿಗೆ ಧರಿಸಿ, ವಿಶೇಷ ಪೂಜೆ ಸಲ್ಲಿಸಲಾಗುತ್ತಾ ಬರಲಾಗುತ್ತಿದೆ ಎನ್ನುತ್ತಾರೆ ಅರ್ಚಕ ಶ್ರೀಹರಿ.

More Images