ಗೃಹಿಣಿಯ ಆತ್ಮಹತ್ಯೆಗೆ ಕಾರಣರಾದವರಿಗೆ ಜೈಲು ಶಿಕ್ಷೆ

ಗೃಹಿಣಿಯ ಆತ್ಮಹತ್ಯೆಗೆ ಕಾರಣರಾದವರಿಗೆ ಜೈಲು ಶಿಕ್ಷೆ

LK   ¦    Jan 09, 2019 06:15:23 PM (IST)
ಗೃಹಿಣಿಯ ಆತ್ಮಹತ್ಯೆಗೆ ಕಾರಣರಾದವರಿಗೆ ಜೈಲು ಶಿಕ್ಷೆ

ಚಾಮರಾಜನಗರ: ಪತಿ ಮತ್ತು ಆತನ ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೇ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಆರೋಪಿಗಳಿಗೆ ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಸಾದಾ ಸಜೆ, 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಗೋಪಾಲಸ್ವಾಮಿ ಮತ್ತು ಆತನ ತಾಯಿ ಚಿನ್ನಮ್ಮ ಶಿಕ್ಷೆಗೊಳಗಾದವರು. ಗೋಪಾಲಸ್ವಾಮಿಯ ಪತ್ನಿ ತ್ರಿವೇಣಿಗೆ ಪತಿ ಗೋಪಾಲಸ್ವಾಮಿ ಮತ್ತು ಆತನ ತಾಯಿ(ಅತ್ತೆ) ಚಿನ್ನಮ್ಮ ಸೇರಿಕೊಂಡು ಆವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಪತಿ ಮತ್ತು ಅತ್ತೆಯ ಕಿರುಕುಳ ತಾಳಲಾರದೇ 2014 ಮಾ.29ರಂದು ರಾತ್ರಿ 7ರ ಸಮಯದಲ್ಲಿ ಮನೆಯು ದನದ ಕೊಟ್ಟಿಗೆಯಲ್ಲಿ ತ್ರಿವೇಣಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ 2014ರ ಏ.2ರಂದು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತರ ಸಂಬಂಧಿಕರು ತೆರಕಣಾಂಬಿ ಠಾಣೆಯಲ್ಲಿ ದೂರು ನೀಡಿದ್ದರು.

ಮೃತರ ಪತಿ ಮತ್ತು ಅತ್ತೆ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾದ ಡಿ.ವಿನಯ್ ಆರೋಪಿಗಳಿಗೆ 3 ವರ್ಷ ಸಾದಾ ಸಜೆ, 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.