ಮೈಸೂರಲ್ಲಿ ಮತ ಎಣಿಕೆ ಸಿಬ್ಬಂದಿಗಳಿಗೆ ಸಲಹೆ ನೀಡಿದ ಡಿಸಿ

ಮೈಸೂರಲ್ಲಿ ಮತ ಎಣಿಕೆ ಸಿಬ್ಬಂದಿಗಳಿಗೆ ಸಲಹೆ ನೀಡಿದ ಡಿಸಿ

LK   ¦    May 20, 2019 04:46:18 PM (IST)
ಮೈಸೂರಲ್ಲಿ ಮತ ಎಣಿಕೆ ಸಿಬ್ಬಂದಿಗಳಿಗೆ ಸಲಹೆ ನೀಡಿದ ಡಿಸಿ

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯವು ಮೇ 23ರಂದು ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ನಡೆಯಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತಎಣಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕರೆದಿದ್ದ ಸಭೆಯಲ್ಲಿ ಅವರು ಮಾಹಿತಿ ನೀಡಿ ಎಣಿಕೆ ಸಿಬ್ಬಂದಿಗಳು ಅಗತ್ಯ ಸಲಹೆಗಳನ್ನು ಪಡೆದುಕೊಂಡು ಎಣಿಕೆ ಕಾರ್ಯ ಮಾಡಬೇಕು. ಎಣಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.

ಎಣಿಕೆ ಸಿಬ್ಬಂದಿಗಳಿಗೆ ಎಣಿಕೆ ಮಾಡುವ ವಿಧಾನಗಳನ್ನು ಮತ್ತು ಅವರ ಕರ್ತವ್ಯಗಳ ಮಾಹಿತಿಯನ್ನು ನೀಡಿದರಲ್ಲದೆ, ಎಣಿಕೆ ಕೇಂದ್ರಕ್ಕೆ ಎಣಿಕೆ ಸೂಪರವೈಸರ್‍ ಗಳು ಮಾತ್ರ ಮೊಬೈಲ್ ತರಲು ಅವಕಾಶವಿದೆ. ಅವರನ್ನು ಹೊರತುಪಡಿಸಿ ಇತರೆ ಸಿಬ್ಬಂದಿಗಳು ಮೊಬೈಲ್ ತರಬಾರದು. ಮಂಗಳವಾರ ಎಲ್ಲಾ ಸಿಬ್ಬಂದಿಗಳಿಗೂ ಬೆಳಗ್ಗೆ 8 ಗಂಟೆಯಿಂದ ರಿಹರ್ಸಲ್ ಕೊಡಲಾಗುವುದು. ಏನೇ ಮಾಹಿತಿ ಬೇಕಿದ್ದರೂ ಕೇಳಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಇ.ಟಿ.ಪಿ.ಬಿ.ಎಸ್ ಮಾಡುವ ಸಿಬ್ಬಂದಿಗಳಿಗೆ 5 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಅವರುಗಳು ನಮೂನೆ 13ಸಿ, 13ಎ ಮತ್ತು 13ಬಿ ಫಾರಂಗಳನ್ನು ಸ್ಕ್ಯಾನ್ ಮಾಡಬೇಕು ಮತ್ತು ಡಾಟಾ ಎಂಟ್ರಿ ಮಾಡುವ ಸಿಬ್ಬಂದಿಗಳು ತುಂಬಾ ಎಚ್ಚರಿಕೆಯಿಂದ ನಿಧಾನವಾದರೂ ಸರಿ ಜಾಗೃತೆಯಿಂದ ಮಾಡಬೇಕು ಎಂದರು.

ಪ್ರತಿಯೊಂದು ಟೇಬಲ್‍ಗಳಲ್ಲೂ ಕಂಪ್ಯೂಟರ್ ಸಿಸ್ಟಮ್, ಇಂಟರ್ ನೆಟ್ ಕನೆಕ್ಷನ್ ಹಾಗೂ ಕ್ಯೂ.ಆರ್ ಕೋಡ್ ಸ್ಕ್ಯಾನರ್ ವ್ಯವಸ್ಥೆ ಇರುತ್ತದೆ ಹಾಗೂ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೂ ಅದರದೇ ಆದ ಯುಸರ್ ನೇಮ್ ಹಾಗೂ ಪಾಸ್‍ವರ್ಡ್ ಇರುತ್ತವೆ ಅದನ್ನು ಪ್ರತಿಯೊಬ್ಬ ಸಿಬ್ಬಂದಿಯೂ ತಿಳಿದಿಕೊಳ್ಳಬೇಕು ಯಾವದೇ ಮತ ಎಣಿಕೆಗಳಲ್ಲಿ ಸಮಸ್ಯೆ ಕಂಡುಬಂದರೆ ಎ.ಆರ್.ಓ ಗಮನಕ್ಕೆ ತರಬೇಕು.

ಅಂಚೆ ಮತಪತ್ರಗಳನ್ನು ಚುನಾವಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಹಾಗೂ ಎಂಟು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುವುದು. ಒಂದು ಟೇಬಲ್‍ನಲ್ಲಿ 500 ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುವುದು ಹಾಗೂ ಪ್ರತಿ ಟೇಬಲ್‍ಗೆ ಒಬ್ಬ ಪತ್ರಾಂಕಿತ ಅಧಿಕಾರಿಯನ್ನು ಎಣಿಕೆ ಮೇಲ್ವಿಚಾರಕರಾಗಿ ಅಲ್ಲದೇ ಪ್ರತಿ ಮೇಜಿಗೆ ಒಬ್ಬ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಮೈಕ್ರೋ ವೀಕ್ಷಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಅವರು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದರು.

ಎಣಿಕೆ ಕೊಠಡಿಗಳಲ್ಲಿ ಈಗಾಗಲೇ ಪ್ರತಿ ಕೊಠಡಿಗೆ 2 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಹಾಗೂ ಎಣಿಕೆಯ ಪ್ರತಿಯೊಂದು ಹಂತದ ಚಿತ್ರೀಕರಣಕ್ಕಾಗಿ ವಿಡಿಯೋಗ್ರಾಫರ್‍ ಗಳನ್ನು ನೇಮಕ ಮಾಡಲಾಗಿದೆ ಮತ್ತು ಪ್ರತಿ ಸುತ್ತು ಮುಗಿದ ನಂತರ ಫಲಿತಾಂಶದ ಮಾಹಿತಿಯನ್ನು ಎ.ಆರ್.ಓ. ಅನುಮತಿ ಪಡೆದು ಅಭ್ಯರ್ಥಿಗಳಿಗೆ ಫಲಿತಾಂಶ ನೀಡಬೇಕು ಎಂದರು.

ಎಣಿಕೆ ಸಿಬ್ಬಂದಿಗಳು ವಿದ್ಯುನ್ಮಾನ ಮತಯಂತ್ರಗಳಲ್ಲಿ ಫಲಿತಾಂಶ ಬಟನ್ ಒತ್ತಿ ಫಲಿತಾಂಶದ ವಿವರಗಳನ್ನು 17 ಸಿ ನಮೂನೆಯ ಭಾಗ-2 ರಲ್ಲಿ ನಮೂದಿಸಿ ಹಾಜರಿರುವ ಎಣಿಕೆ ಏಜೆಂಟರ ಸಹಿ ಪಡೆದು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಅಂಚೆ ಮತ ಎಣಿಕೆ ಪ್ರಾರಂಭವಾದ ನಂತರ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯವನ್ನು ಸಹಾಯಕ ಚುನಾವಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಎಲ್ಲಾ ಇ.ವಿ.ಎಂ ಗಳ ಎಣಿಕೆ ಕಾರ್ಯ ಮುಗಿದ ಬಳಿಕ 5 ವಿವಿ ಪ್ಯಾಟ್‍ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಆಯ್ಕೆಯಾದ 5 ವಿವಿ ಪ್ಯಾಟ್‍ಗಳ ಸ್ಲಿಪ್‍ಗಳನ್ನು ಎಣಿಕೆ ಮಾಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಶಿಲ್ಪನಾಗ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ಮತ ಎಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು