ಮೈಸೂರು ಬಸ್ ನಿಲ್ದಾಣದಲ್ಲಿ ಚಿತ್ರದೊಂದಿಗೆ ಮತಜಾಗೃತಿ

ಮೈಸೂರು ಬಸ್ ನಿಲ್ದಾಣದಲ್ಲಿ ಚಿತ್ರದೊಂದಿಗೆ ಮತಜಾಗೃತಿ

LK   ¦    Apr 10, 2019 05:00:20 PM (IST)
ಮೈಸೂರು ಬಸ್ ನಿಲ್ದಾಣದಲ್ಲಿ ಚಿತ್ರದೊಂದಿಗೆ ಮತಜಾಗೃತಿ

ಮೈಸೂರು: ನಗರದ ಬಸ್ ನಿಲ್ದಾಣದಲ್ಲಿ ನಾಗರಿಕರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಮತದಾನದ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಸ್ವೀಪ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜ್ಯೋತಿ ಅವರು ದಿನನಿತ್ಯ ಸಾವಿರಾರು ಜನರು ಬಸ್‍ನಲ್ಲಿ ವಿವಿಧ ಪ್ರದೇಶಗಳಿಗೆ ತೆರಳಲು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಪ್ರಯಾಣಿಕರಿಗೆ ಚುನಾವಣೆಯಲ್ಲಿ ಮತದಾನ ಮಾಡುವಂತಹ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನ ಮಾಡುವ ಮೂಲಕ ನಾಗರಿಕರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಮೂಡಿಸುವ ಛಾಯಚಿತ್ರ ಪ್ರದರ್ಶನ ಏರ್ಪಡಿಸಿರುವುದಾಗಿಯೂ ವಿವರಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಛಾಯಾಚಿತ್ರ ಪ್ರದರ್ಶನದಲ್ಲಿ “ಅಶಕ್ತರಿಗೆ ಮೊದಲ ಪ್ರಾಶಸ್ತ್ಯ ಅವರಿಗಾಗಿ ವಿಶೇಷ ಸೌಲಭ್ಯ”, “ಅಕ್ರಮ ಕಂಡಲ್ಲಿ ಚಿತ್ರೀಕರಿಸಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಿ”, “ಹಣ, ಮದ್ಯ ಹಾಗೂ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದಿರಿ”, “ಎಲ್ಲರೂ ಚೆನ್ನಾಗಿ ಆಡಿದ್ರೆ ಮ್ಯಾಚ್ ಗೆಲ್ಲುತ್ತೇವೆ ಪ್ರತಿಯೊಬ್ಬರೂ ಓಟ್ ಮಾಡಿದ್ರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ” “ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ ಮತದಾನ ದೇಶವನ್ನು ರೂಪಿಸುತ್ತದೆ”, “ಮಾಡಿ ಮಾಡಿ ಮತದಾನ ಇರಲಿ, ದೇಶದ ಮೇಲೆ ಅಭಿಮಾನ”, “ಮತದಾನದಲ್ಲಿ ಹಿರಿಯರಿಗೆ ಆದ್ಯತೆ ನಾವು ನಾಗರಿಕರಿಗೆ ನೆರವಾಗುತ್ತವೆ”, “ನಮ್ಮ ದೇಶದ ಭವಿಷ್ಯ ನಿರ್ಮಾಣ ಶಕ್ತಿ ನಮ್ಮ ಓಟಿಗಿದೆ”, “ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು” ಎಂಬ ಚುನಾವಣೆ ಸಂದೇಶ ಸಾರುವ ಸಾಲುಗಳು ಛಾಯಾಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ.

 

More Images