ಸಂಕಷ್ಟದಲ್ಲಿ ವಿಭೂತಿ ತಯಾರಿಸುವ ಹಿರೇಮಠ ಜನಾಂಗ

ಸಂಕಷ್ಟದಲ್ಲಿ ವಿಭೂತಿ ತಯಾರಿಸುವ ಹಿರೇಮಠ ಜನಾಂಗ

LK   ¦    Feb 13, 2018 04:19:56 PM (IST)
ಸಂಕಷ್ಟದಲ್ಲಿ ವಿಭೂತಿ ತಯಾರಿಸುವ ಹಿರೇಮಠ ಜನಾಂಗ

ಮೈಸೂರು: ಶಿವರಾತ್ರಿ ಬಂದಿದೆ. ಹಬ್ಬದ ಆಚರಣೆಯಲ್ಲಿ ವಿಭೂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲ ಶಿವನ ದೇಗುಲ, ಮನೆಗಳಲ್ಲಿ ವಿಭೂತಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ.

ಇತರೆ ದಿನಗಳಲ್ಲಿ ವಿಭೂತಿಗೆ ಹೆಚ್ಚಿನ ಬೇಡಿಕೆ ಇಲ್ಲವಾದರೂ ಶಿವರಾತ್ರಿ ಹಬ್ಬದಂದು ಹೆಚ್ಚಿನ ಬೇಡಿಕೆ ಕಂಡು ಬರುವುದರಿಂದ ಅದನ್ನು ತಯಾರಿಸುವ ಕುಟುಂಬಗಳ ಮನೆಯಲ್ಲಿ ಸಂಚಲನ ಉಂಟಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಶಿವರಾತ್ರಿ ಸಂದರ್ಭ ವಿಭೂತಿ ತಯಾರಿಸಿ ಮಾರಾಟ ಮಾಡಿ ಒಂದಷ್ಟು ಹಣ ಸಂಪಾದಿಸುವುದು ಮಾಮೂಲಿಯಾಗಿದೆ. ಉಳಿದಂತೆ ಅವರ ಬದುಕು ಮಾತ್ರ ಮೂರಾಬಟ್ಟೆಯಾಗಿರುತ್ತದೆ.

ಯಾಂತ್ರಿಕ ಯುಗದ ಭರಾಟೆಯಲ್ಲಿ ಕುಲಕಸುಬುಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿರುವ ದಿನದಲ್ಲಿ  ಕೆಲವರು ತಮ್ಮ ತಾತ ಮುತ್ತಾಂತದಿರು ಮಾಡುತ್ತಿದ್ದುದನ್ನು ಮುಂದುವರೆಸುತ್ತಿದ್ದು, ಇಂತಹ ಕುಟುಂಬಗಳ ಪೈಕಿ ಮೈಸೂರಿನಲ್ಲಿರುವ ಹಿರೇಮಠ ಜನಾಂಗ ಒಂದಾಗಿದೆ. ಇವರು ಶಿವನ ಆರಾಧಕರಾಗಿದ್ದು, ವಿಭೂತಿಯನ್ನು ಹೆಚ್ಚಾಗಿ ಬಳಸುವುದಲ್ಲದೆ, ತಯಾರಿಕೆಯನ್ನು ಮಾಡುತ್ತಾ ಜೀವನ ಸಾಗಿಸುತ್ತಾರೆ. ಇವತ್ತು ಯಂತ್ರಗಳ ಮೂಲಕ ವಿಭೂತಿ ತಯಾರಿಕೆ ನಡೆಯುತ್ತಿದ್ದರೂ ಕೆಲವರು ಇನ್ನೂ ಕೂಡ ಅದನ್ನೇ ನಂಬಿಕೊಂಡು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.

ಮೈಸೂರು ಅರಸರ ಕಾಲದಲ್ಲಿ ಪಾರಂಪರಿಕ ನಗರಿ ಮೈಸೂರಿನಲ್ಲಿ ವಿಭೂತಿ ತಯಾರಿಸುವ ಜನಾಂಗಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿತ್ತು. ಅವರು ತಯಾರಿಸಿದ ವಿಭೂತಿ ಅರಮನೆಯ ಸಕಲ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ತದ ನಂತರದ ಕಾಲಗಳಲ್ಲಿ ವಿಭೂತಿ ಬಳಕೆ ಒಂದಷ್ಟು ಇಳಿಮುಖವಾಯಿತು. ಜತೆಗೆ ಯಂತ್ರಗಳಿಂದ ತಯಾರಾಗಿ ದೂರದಿಂದ ಬರತೊಡಗಿದವು. ಇದರಿಂದ ಕೈಯ್ಯಿಂದ ಕಷ್ಟಪಟ್ಟು ತಯಾರಿಸಿದ ವಿಭೂತಿಗಳಿಗೆ ಬೇಡಿಕೆ ಒಂದಷ್ಟು ಕಡಿಮೆಯಾಯಿತು ಎಂದರೆ ತಪ್ಪಾಗಲಾರದು.

ಮೈಸೂರಿನ ಹುಲ್ಲಹಳ್ಳಿ ಮತ್ತು ಗೌರಿಶಂಕರನಗರದಲ್ಲಿ ವಿಭೂತಿ ತಯಾರಿಸುವ ಕುಟುಂಬಗಳಿದ್ದು, ಹತ್ತು ಹಲವು ಸಂಕಷ್ಟದ ನಡುವೆಯೂ ತಮ್ಮ ಮನೆಯಲ್ಲೇ ತಯಾರಿಸಿ ಬಳಿಕ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೊಂಡೊಯ್ದು ಮಾರಾಟ ಮಾಡಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ವಿಭೂತಿಗೆ ಮೂರು ತಲೆಮಾರುಗಳ ಇತಿಹಾಸವಿದ್ದು, ಸದಾಶಿವ ಹಿರೇಮಠ್, ರಾಚಯ್ಯ ಹಿರೇಮಠ್ ಸಹೋದರರು ಕುಲಕಸುಬಾದ ವಿಭೂತಿ ತಯಾರಿಕೆಯನ್ನು ಮಾಡುತ್ತಿದ್ದು, ಕಷ್ಟದ ನಡುವೆಯೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ವಿಭೂತಿಗೆ ಬೇಕಾದ ಕಚ್ಚಾವಸ್ತುವನ್ನು ಆಂಧ್ರದಿಂದ ತರಲಾಗುತ್ತದೆ. ಬಳಿಕ ವಿವಿಧ ನಮೂನೆಗಳಲ್ಲಿ ತಯಾರಿಸಿ ಅದನ್ನು ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ. ಹಸುವಿನ ಸೆಗಣಿಯಿಂದ ತಯಾರಿಸಿದ ವಿಭೂತಿ ಶ್ರೇಷ್ಠವಾಗಿದೆ. ಆದರೆ ಅದರ ಬಗ್ಗೆ ಜನಕ್ಕೆ ಗೊತ್ತಿಲ್ಲ. ಬದಲಿಗೆ ಸುಂದರವಾಗಿ ಕಾಣುವ ವಿಭೂತಿಗೆ ಮೊರೆಹೋಗುವುದರಿಂದ ಯಂತ್ರಗಳಿಂದ ತಯಾರಿಸಿದ ವಿಭೂತಿಗೆ ಜನ ಮಾರು ಹೋಗುವುದರಿಂದ ಕುಲಕಸುಬಾಗಿ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಶಿವರಾತ್ರಿ ಬಂದಾಗ ಶಿವನ ನೆನೆಯುತ್ತಾ ವಿಭೂತಿ ಹಚ್ಚುವ ಜನಕ್ಕೆ ಅದರ ಹಿಂದೆ ಶ್ರಮ ವಹಿಸಿ ದುಡಿಯುವ ಹಿರೇಮಠ ಜನಾಂಗದ ನೋವು ತಿಳಿಯುವುದೇ ಇಲ್ಲ.

More Images