ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಮೂವರು ಬಲಿ

ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಮೂವರು ಬಲಿ

LK   ¦    Feb 13, 2018 02:22:30 PM (IST)
ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಮೂವರು ಬಲಿ

ರಾಮನಗರ: ಸಾಲ ಮಾಡಿಕೊಂಡಿದ್ದ ರೇಷ್ಮೆ ವ್ಯಾಪಾರಿಯೊಬ್ಬ ಸಾಲಗಾರರ ಕಾಟದಿಂದ ಬೇಸತ್ತು ಹೆಂಡತಿ, ಮಗನೊಂದಿಗೆ ನೇಣಿಗೆ ಶರಣಾದ ಘಟನೆ ಕನಕಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಜವನಮ್ಮನದೊಡ್ಡಿ ಸಮೀಪದ ಲಕ್ಷ್ಮೀಪುರ ಗ್ರಾಮದ ನಿವಾಸಿ ಸೋಮಶೇಖರ್ (36), ಪತ್ನಿ ಸುಧಾ(27), ಮಗ ಪ್ರೀತಮ್ (1) ನೇಣಿಗೆ ಶರಣಾದ ದುರ್ದೈವಿಗಳು.

ಮೃತ ಸೋಮಶೇಖರ್ ಗೆ 3 ವರ್ಷದ ಪ್ರೇರಣ ಎಂಬ ಹೆಣ್ಣು ಮಗುವಿದ್ದು, ಈ ಬಾಲಕಿ ಸೆಂಟರೀಟಾ ಶಾಲೆಗೆ ಹೋಗಿ ಸಂಜೆ ಮನೆಗೆ ವಾಪಸ್ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಪ್ರೇರಣ ಶಾಲೆಯಿಂದ ಬಂದಾಗ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಕಿಟಕಿಯಿಂದ ನೋಡಿದಾಗ ತಾಯಿ ಸುಧಾ ಮತ್ತು ಸಹೋದರ ಪ್ರೀತಮ್ ಹೆಣವಾಗಿ ನೇತಾಡುತ್ತಿರುವುದನ್ನು ಕಂಡಿದ್ದು ತನ್ನ ಅಜ್ಜಿಗೆ ವಿಷಯ ತಿಳಿಸಿದ್ದಾಳೆ. ನಂತರ ಅಕ್ಕಪಕ್ಕದವರು ಬಂದು ಬಾಗಿಲು ಒಡೆದು ಒಳನುಗ್ಗಿದಾಗ ತಾಯಿ ಮಗು ಮನೆಯ ಹಾಲ್ ನಲ್ಲಿ, ಸೋಮಶೇಖರ್ ಸ್ನಾನಗೃಹದಲ್ಲಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.

ಮೃತ ಸೋಮಶೇಖರ್ ರೇಷ್ಮೆಗೂಡಿನ ವ್ಯಾಪಾರ ಮಾಡುತ್ತಿದ್ದು, ಇದಕ್ಕಾಗಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಮನೆ ಬಾಗಿಲಿಗೆ ಬಂದು ಪೀಡಿಸುತ್ತಿದ್ದ ಕಾರಣ ಗಂಡ ಹೆಂಡತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಪತ್ನಿ ಸುಧಾ ಮತ್ತು ಮಗ ಪ್ರೀತಮ್ ಗೆ ನೇಣು ಬಿಗಿದು ಆ ನಂತರ ಸೋಮಶೇಖರ್ ಕೂಡ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಸಂಶಯಪಡಲಾಗಿದೆ. ಸಾಲ ಮಾಡಿದ್ದ ಹಿನ್ನಲೆಯಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಹೋಗಿದ್ದರಿಂದ ಬಾಲಕಿ ಪ್ರೇರಣ ಸಾವಿನ ಕುಣಿಕೆಯಿಂದ ಪಾರಾಗಿದೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ.ಮಲ್ಲೇಶ್ ಮತ್ತು ಸಬ್ ಇನ್ಸ್ ಪೆಕ್ಟರ್ ನಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವವನ್ನು ನೀಡಲಾಗಿದೆ