ಗೂಡ್ಸ್ ಕ್ಯಾಂಟರ್ ಡಿಕ್ಕಿ: ಸವಾರ ಸಾವು

ಗೂಡ್ಸ್ ಕ್ಯಾಂಟರ್ ಡಿಕ್ಕಿ: ಸವಾರ ಸಾವು

LK   ¦    Oct 11, 2018 07:35:02 PM (IST)
ಗೂಡ್ಸ್ ಕ್ಯಾಂಟರ್ ಡಿಕ್ಕಿ: ಸವಾರ ಸಾವು

ಕೆ.ಆರ್.ಪೇಟೆ: ಬೈಕಿಗೆ ಗೂಡ್ಸ್ ಕ್ಯಾಂಟರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕುಪ್ಪಹಳ್ಳಿ-ಬಿ.ಬಿ.ಕಾವಲು ಸರ್ಕಲ್‍ನಲ್ಲಿ ಗುರುವಾರ ನಡೆದಿದೆ.

ತಾಲೂಕಿನ ವಡ್ಡರಹಳ್ಳಿ ಗ್ರಾಮದ ಮಂಜೇಗೌಡ ಅವರ ಪುತ್ರ ವಿಶ್ವನಾಥ್(19) ಮೃತಪಟ್ಟ ಸವಾರ. ತಾಲೂಕಿನ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡುತ್ತಿರುವ ವಿಶ್ವನಾಥ್ ಬ್ಯಾಂಕ್ ಕೆಲಸ ನಿಮಿತ್ತ ಬಂಡಿಹೊಳೆ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ನುಗ್ಗಿ ಬಂದ ಗೂಡ್ಸ್ ಕ್ಯಾಂಟರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ವಿಶ್ವನಾಥ್ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೃತನ ತಂದೆ ಮಂಜೇಗೌಡ ಅವರು ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆನಂದ್‍ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ನಂತರ ಕ್ಯಾಂಟರ್ ಚಾಲಕ ಬೋರೇಗೌಡ ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.