ಅಣ್ಣೂರಲ್ಲಿ ಸ್ನೇಹಿತೆಯ ಪ್ರಾಣ ಉಳಿಸಿದ ಪೋರಿ

ಅಣ್ಣೂರಲ್ಲಿ ಸ್ನೇಹಿತೆಯ ಪ್ರಾಣ ಉಳಿಸಿದ ಪೋರಿ

LK   ¦    Nov 14, 2017 07:43:23 PM (IST)
ಅಣ್ಣೂರಲ್ಲಿ ಸ್ನೇಹಿತೆಯ ಪ್ರಾಣ ಉಳಿಸಿದ ಪೋರಿ

ಭಾರತೀನಗರ: ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯನ್ನು ತನ್ನ ಸಮಯಪ್ರಜ್ಞೆಯಿಂದ ಛಲದೊಂದಿಗೆ ಹೋರಾಡಿ ಉಳಿಸಿರುವ ಘಟನೆ ಅಣ್ಣೂರು ಗ್ರಾಮದಲ್ಲಿ ನಡೆದಿದೆ.

ಅಣ್ಣೂರು ಗ್ರಾಮದ ಅಜಿತ್ ಕುಮಾರ್ ಪುತ್ರಿ ಚಂದನ ಸಮಯಪ್ರಜ್ಞೆ ಮೆರೆದ ಪುಟ್ಟಪೋರಿ. ಅದೇ ಗ್ರಾಮದ ಚಂದ್ರಶೇಖರ್ ಮತ್ತು ವಿನುತಾ ದಂಪತಿ ಪುತ್ರಿ ರೀತಾ ಸಾವಿನ ದವಡೆಯಿಂದ ಪಾರಾದವಳು.

ರೀತಾ ಮತ್ತು ಚಂದನ ಇಬ್ಬರೂ ಸ್ನೇಹಿತೆಯರು. ಇಬ್ಬರೂ ಅಂಗಡಿಯಲ್ಲಿ ತಿಂಡಿಕೊಂಡು ಬರುವಾಗ ರೀತಾ ಮೆಟ್ಟಿದ್ದ ಚಪ್ಪಲಿಗೆ ಸಗಣಿ ಮೆತ್ತಿಕೊಂಡಿದೆ. ಮನೆಯ ಬಳಿ ಇದ್ದ ನೀರಿನ ಕಟ್ಟೆಗಿಳಿದು ಚಪ್ಪಲಿಯನ್ನು ತೊಳೆಯಲು ಮುಂದಾದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾಳೆ.

ರೀತಾಳನ್ನು ಕೈ ಹಿಡಿದ ಚಂದನಾ ಆಕೆಯನ್ನು ಮೇಲೆಳೆದರೂ ದಡ ಸೇರಿಸಲಾಗಲಿಲ್ಲ. ಕೂಡಲೇ ಚಂದನಾ ಸಮಯವ್ಯರ್ಥ ಮಾಡದೆ ರೀತಾಳ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಇದನ್ನು ರೀತಾ ತಂದೆ ಚಂದ್ರಶೇಖರ್ ನಂಬದೆ ನಿರ್ಲಕ್ಷ್ಯ ಮಾಡಿದ್ದಾರೆ.

ಅಲ್ಲಿಯೂ ನಿಲ್ಲದ ಚಂದನ ಕೂಡಲೇ ತನ್ನ ತಂದೆ ಅಜಿತ್ ಕುಮಾರ್ ಬಳಿ ಹೋಗಿ ರೀತಾ ನೀರಿನಲ್ಲಿ ಮುಳುಗುತ್ತಿರುವ ಸನ್ನಿವೇಶವನ್ನು ತನ್ನ ತೊದಲು ನುಡಿಗಳಲ್ಲಿ ವಿವರಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ತೆರಳಿದ ಅಜಿತ್ ಕುಮಾರ್ 8 ಅಡಿ ಆಳವಿದ್ದ ನೀರಿನ ಕಟ್ಟೆಗಿಳಿದಾಗ ಅವರ ಕಾಲಿಗೆ ರೀತಾಳ ದೇಹ ತಾಗಿದೆ. ತಕ್ಷಣ ಮಗವನ್ನು ಮೇಲೆತ್ತಿದ ಅಜಿತ್, ಪ್ರಾಥಮಿಕ ಚಿಕಿತ್ಸೆ ನೀಡಿ ದೇಹದಲ್ಲಿ ಸೇರಿದ್ದ ನೀರನ್ನು ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ನೀಡಿದಾಗ ಮಗು ಕಣ್ಣು ಬಿಟ್ಟಿದೆ.

ಅಷ್ಟರಲ್ಲಿ ರೀತಾಳ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದರು. ನೀರು ಕುಡಿದು ಕಣ್ಣು ಮುಚ್ಚಿದ್ದ ಮಗಳು ಬದುಕಿದ್ದಾಳೋ ಇಲ್ಲವೋ ಎಂಬ ಆತಂಕದಲ್ಲಿ ಗೋಳಾಡಿದರು. ಮಗು ಸುರಕ್ಷಿತವಾಗಿತ್ತು. ಕೂಡಲೇ ರೀತಾಳನ್ನು ಭಾರತೀನಗರದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು.

ಎರಡು ದಿನಗಳ ವೈದ್ಯಕೀಯ ಚಿಕಿತ್ಸೆಯಿಂದ ಗುಣಮುಖಳಾದ ರೀತಾ ಸಾವಿನ ದವಡೆಯಿಂದ ಪಾರಾಗಿ ಮನೆ ಸೇರುವಂತಾಯಿತು. 

More Images