ಮೈಸೂರಿನಲ್ಲಿ ಹಳೇ ಐನೂರು ಸಾವಿರ ನೋಟುಗಳ ಸ್ಮರಣೆ

ಮೈಸೂರಿನಲ್ಲಿ ಹಳೇ ಐನೂರು ಸಾವಿರ ನೋಟುಗಳ ಸ್ಮರಣೆ

MY   ¦    Nov 08, 2018 03:19:42 PM (IST)
ಮೈಸೂರಿನಲ್ಲಿ ಹಳೇ ಐನೂರು ಸಾವಿರ  ನೋಟುಗಳ ಸ್ಮರಣೆ

ಮೈಸೂರು: ಹಳೇ ನೋಟುಗಳು ನಿಷೇಧವಾಗಿ ಇಂದಿಗೆ ಎರಡು ವರ್ಷವಾದ ಹಿನ್ನಲೆಯಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯು ವತಿಯಿಂದ ಮೈಸೂರಿನ ಅಗ್ರಹಾರದ ಮಾಧವರಾವ್ ವೃತ್ತದಲ್ಲಿ ಹಳೇ ನೋಟುಗಳ ಚಿತ್ರವನ್ನಿಟ್ಟು ಅದಕ್ಕೆ ಪುಷ್ಪಾರ್ಚನೆಗೈದು ಸ್ಮರಣೆ ಮಾಡಲಾಯಿತು.

ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಕಡಕೊಳ ಜಗದೀಶ್ ಮಾತನಾಡಿ ಪ್ರಾಚೀನ ಕಾಲದಲ್ಲಿ ನಿತ್ಯ ಬಳಕೆಯ ಆಹಾರ ಧಾನ್ಯಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಪ್ರಾರಂಭವಾಗಿ ಇಂದು ಅಂತರಾಷ್ಟ್ರೀಯ ಮಟ್ಟದ ವ್ಯವಹಾರಗಳ ಕಾಲಘಟ್ಟದಲ್ಲಿ ನಾವಿದ್ದೇವೆ. ಬೇರೆ ಬೇರೆ ರಾಜ-ಮಹಾರಾಜರುಗಳ ಆಳ್ವಿಕೆಯ ಕಾಲದ ನಾಣ್ಯಗಳು ಇಂದು ವಸ್ತು ಸಂಗ್ರಹಾಲಯಗಳ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಹೀಗಾಗಿ ನಾಣ್ಯ-ನೋಟುಗಳು ನಿಷೇಧವಾದರೂ ಜನರೊಂದಿಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಕಪ್ಪು ಹಣ, ಖೋಟಾ ನೋಟುಗಳ ಹಾವಳಿಯಿಂದ ಮತ್ತು ದೊಡ್ಡ ಮೊತ್ತ ವಿನಿಯೋಗದ ಅನಿವಾರ್ಯತೆಯಿಂದ ನೋಟುಗಳ ರೂಪ ಬದಲಾದರೂ ಮೌಲ್ಯ ಇದ್ದೇ ಇರುತ್ತದೆ ಎಂದು ತಿಳಿಸಿದರು.

ನಮ್ಮ ಜೀವನದ ಪ್ರಮುಖ ಘಟ್ಟಗಳಾದ ಮದುವೆ-ಮುಂಜಿ, ಸಾವು-ನೋವುಗಳಲ್ಲಿ ಎಟಿಎಂ ಇಲ್ಲದ ಸಮಯದಲ್ಲಿ ಬ್ಯಾಂಕ್‍ನಲ್ಲಿ ಸರತಿ ನಿಂತು ಪಡೆಯುತ್ತಿದ್ದ 500, 1000 ರೂ.ಗಳ ನೋಟುಗಳನ್ನು ಇದೇ ವೇಳೆ ಸ್ಮರಿಸಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರತಿ, ವಿಕ್ರಮ್ ಅಯ್ಯಂಗಾರ್, ಜಯಸಿಂಹ, ಹರೀಶ್ ನಾಯ್ಡು, ಕುಮಾರಗೌಡ, ರಂಗನಾಥ, ಶ್ರೀಕಾಂತ್ ಕಶ್ಯಪ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.