ಮೈಸೂರಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ!

ಮೈಸೂರಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ!

LK   ¦    Mar 19, 2020 06:14:01 PM (IST)
ಮೈಸೂರಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ!

ಮೈಸೂರು: ನಗರದಲ್ಲಿ ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಮಸಾಜ್ ಸೆಂಟರ್‌ಗಳ ಮೇಲೆ ದಾಳಿ ಮಾಡುತ್ತಿರುವ ಸಿಸಿಬಿ ಪೊಲೀಸರು ಅಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆಯನ್ನು ಬಯಲಿಗೆಳೆಯುತ್ತಿರುವುದರಿಂದ ಇದೀಗ ಮಸಾಜ್ ಸೆಂಟರ್‌ಗಳನ್ನು ಜನ ಅನುಮಾನದಿಂದ ನೋಡುವಂತಾಗಿದೆ.

ಒಂದೆಡೆ ಕೊರೋನಾ ವೈರಸ್ ಭೀತಿ ಎಲ್ಲೆಡೆ ಹರಡುತ್ತಿದ್ದು, ಜನ ಮನೆಯಿಂದ ಹೊರಗೆ ಹೋಗಲು ಭಯಪಡುತ್ತಿದ್ದರೂ ವೇಶ್ಯಾವಾಟಿಕೆಯ ದಂಧೆಗಳು ಮಾತ್ರ ಯಾವುದೇ ಆತಂಕವಿಲ್ಲದೆ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಡುವೆ ಮಸಾಜ್ ಸೆಂಟರ್ ನೆಪದಲ್ಲಿ ಕೆಲವು ಮಹಿಳೆಯರೇ ವೇಶ್ಯಾವಾಟಕೆಯನ್ನು ನಡೆಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಪ್ರಕರಣಗಳಿಂದ ಸಾಬೀತಾಗುತ್ತಿದೆ.

ಸಿಸಿಬಿ ಪೊಲೀಸರು ಮಸಾಜ್ ಸೆಂಟರ್‌ಗಳ ಮೇಲೆ ಕಣ್ಣಿಟ್ಟಿದ್ದು, ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿ ಬಳಿಕ ದಾಳಿ ಮಾಡುತ್ತಿದ್ದಾರೆ. ಈಗಾಗಲೇ ನಗರದ ಕೆಲವು ಮಸಾಜ್ ಸೆಂಟರ್‌ಗಳ ಬಾಗಿಲು ತಟ್ಟಿದ್ದು ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಇದೀಗ ಜನ ಕೊರೋನಾದ ಭೀತಿಯಲ್ಲಿರುವಾಗ ನಗರದ ಹೈ-ವೇ ಸರ್ಕಲ್ ಬಳಿಯ ಡ್ರೀಮ್ ಸ್ಪಾ ಮತ್ತು ಬ್ಯೂಟಿ ಜೋನ್ ಎಂಬ ಮಸಾಜ್ ಸೆಂಟರ್‌ನಲ್ಲಿ ಮಸಾಜ್ ಮಾಡುವ ನೆಪದಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದದ್ದು ಸಿಸಿಬಿ ಪೊಲೀಸರ ದಾಳಿಯಿಂದ ಹೊರಕ್ಕೆ ಬಂದಿದೆ.

ಮೂಲತಃ ಮಂಡ್ಯದ ನಿವಾಸಿ ಲಾರೆನ್ಸ್ ಎಂಬಾತನ ಪತ್ನಿ ಎಲಿಜಬೆತ್ ರಾಣಿ ಎಂಬಾಕೆ ಡ್ರೀಮ್ ಸ್ಪಾ ಮತ್ತು ಬ್ಯೂಟಿ ಜೋನ್ ಎಂಬ ಮಸಾಜ್ ಸೆಂಟರ್  ನಡೆಸುತ್ತಿದ್ದು, ಮೇಲ್ನೋಟಕ್ಕೆ ಇದು ಮಸಾಜ್ ಸೆಂಟರ್ ಆಗಿತ್ತಾದರೂ ಒಳಗೆ ನಡೆಯುತ್ತಿದ್ದದ್ದೇ ಬೇರೆಯಾಗಿತ್ತು. ಇಲ್ಲಿ ಕೆಲವು ಮಹಿಳೆಯರನ್ನಿಟ್ಟುಕೊಂಡು ಈಕೆ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಡಿ.ಸಿ.ಪಿ ಡಾ. ಎ.ಎನ್.ಪ್ರಕಾಶ್‌ಗೌಡ ಮತ್ತು  ಸಿ.ಸಿ.ಬಿ.ಯ ಎ.ಸಿ.ಪಿ. ವಿ.ಮರಿಯಪ್ಪರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಇನ್ಸ್‌ಪೆಕ್ಟರ್  ಎ.ಮಲ್ಲೇಶ, ಎನ್.ಆರ್.ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ.ಶೇಖರ್, ಎ.ಎಸ್.ಐ. ಆರ್.ರಾಜು, ಸಿಬ್ಬಂದಿ ಜೋಸೆಫ್ ನೊರೋನ್ಹ, ಡಿ.ಶ್ರೀನಿವಾಸ್‌ಪ್ರಸಾದ್, ಡಬ್ಲ್ಯೂ.ಡಿ.ದೀಪಕ್, ಪುರುಷೋತ್ತಮ್, ವಿ.ರಘು, ರಾಜಶ್ರೀ ಜಾಲವಾದಿ, ಗಾಯತ್ರಿ, ಶ್ರೀಕಂಠ ಮತ್ತು ಕೆ.ಜಿ.ಶ್ರೀನಿವಾಸ್ ಅವರನ್ನೊಳಗೊಂಡ ತಂಡವನ್ನು ರಚಿಸಿ ದಾಳಿ ನಡೆಸಲಾಯಿತು.

ಈ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಲಿಜಬೆತ್ ರಾಣಿ ಮತ್ತು ವೇಶ್ಯಾವಾಟಿಕೆಗೆ ಗಿರಾಕಿಯಾಗಿ ಬಂದಿದ್ದ ಮೈಸೂರಿನ ವಿಜಯನಗರ ನಿವಾಸಿ ಮಧು ಎಂಬಾತ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ. ವೇಶ್ಯಾವಾಟಿಕೆಯಿಂದ ಸಂಪಾದಿಸಿದ್ದ ರೂ.೬೦೦೦ ನಗದು, ಮೊಬೈಲ್ ಫೋನ್ ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧs ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.  ಪೊಲೀಸರ ಈ ಕಾರ್ಯವನ್ನು ಮೈಸೂರು ನಗರ ಪೊಲೀಸ್ ಕಮೀಷ್ನರ್ ಡಾ. ಚಂದ್ರಗುಪ್ತ ಪ್ರಶಂಸಿದ್ದಾರೆ.