ಹನೂರು ಬಳಿ ಆನೆ ಕೊಂದು ದಂತ ಅಪಹರಣ 

ಹನೂರು ಬಳಿ ಆನೆ ಕೊಂದು ದಂತ ಅಪಹರಣ 

Feb 09, 2019 05:03:33 PM (IST)
ಹನೂರು ಬಳಿ ಆನೆ ಕೊಂದು ದಂತ ಅಪಹರಣ 

ಚಾಮರಾಜನಗರ: ಜಿಲ್ಲೆಯ ಕಾವೇರಿ ವನ್ಯಧಾಮದ ಕೊತ್ತನೂರು ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವೊಂದನ್ನು ನಾಡ ಬಂದೂಕಿನಿಂದ ಹತ್ಯೆ ಮಾಡಿ ದಂತ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ವ್ಯಾಪ್ತಿಯ ಕೊತ್ತನೂರು ಗ್ರಾಮದ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದ ಚಿಕ್ಕಲ್ಲೂರು ಬೀಟ್‌ನ ವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಆನೆಯ ಕಳೇಬರ ಕಂಡು ಬಂದಿದೆ.

ಚಿಕ್ಕಲ್ಲೂರು ಜಾತ್ರೆಯ ಆಜುಬಾಜಿನಲ್ಲಿ ಬೇಟೆಗಾರರು ಸುಮಾರು ೫೦ ವರ್ಷದ ಗಂಡಾನೆಯ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿ ದಂತ ಬೇರ್ಪಡಿಸಲು ಆಸಿಡ್ ಬಳಸುವ ಮೂಲಕ ಆನೆಯ ದಂತಗಳನ್ನು ಅಪಹರಣ ಮಾಡಿದ್ದಾರೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆನೆಯ ಕಳೆಬರ ಪತ್ತೆಯಾಗಿದೆ. ತಕ್ಷಣ ಅವರು ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಿದ್ದು, ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರಾಜಶೇಖರಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆ ಕಳೆದ ೧೫ರಿಂದ ೨೦ ದಿನಗಳ ಹಿಂದೆ ನಡೆದಿರ ಬಹುದೆಂದು ಹೇಳಲಾಗಿದೆ. ಆನೆಯನ್ನು ದಂತಕ್ಕಾಗಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈಗಾಗಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹನೂರು ವಲಯದ ಎಸಿಎಫ್ ಅಂಕರಾಜು ತಿಳಿಸಿದ್ದಾರೆ.