ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಸಂಸದರ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ

ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಸಂಸದರ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ

Jan 11, 2017 05:19:58 PM (IST)

ಮೈಸೂರು: ಜಲದರ್ಶಿನಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಮುಂದಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಈ ಪ್ರಯುಕ್ತ ಸಂಸದರ ಮನೆ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿದ್ದು ಜನವರಿ 19ರಂದು ಬೆಳಿಗ್ಗೆ 11ಗಂಟೆಗೆ  ಕೊಡಗು ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿ ಮುಂದೆ ಧ್ರುವನಾರಾಯಣ್ ಅವರ ನಿವಾಸ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಕೆಂದ್ರದ ಬಜೆಟ್ ನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಲು ರಾಜ್ಯದ 28 ಸಂಸದರ ಮನೆ ಮುಂದೆ ಜನವರಿ 19ರಂದು ಧರಣಿ ನಡೆಸಲು ರಾಜ್ಯ ರೈತರ ಸಂಘ ನಿರ್ಧರಿಸಿದೆ.

ಕೇಂದ್ರ ಸಚಿವ ಅಂತಕುಮಾರ್ ಅವರ ಬೆಂಗಳೂರು ನಿವಾಸದ ಎದುರು ಜ.21 ರಂದು ಬೃಹತ್ ಪ್ರತಿಭಟನೆ ನಡೆಸಿ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಲಾಗುವುದು ಎಂದರಲ್ಲದೇ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಕುರಿತು ಚರ್ಚಿಸಲು ರೈತರ ಸಭೆ ಕರೆಯುವಂತೆ ಮನವಿ ಮಾಡಲಾಗುವುದು ಎಂದರು.

ಈ ಸಂದರ್ಭ ರೈತ ಮುಖಂಡರಾದ ಆಶ್ವಥ್ ನಾರಾಯಣ ರಾಜ ಅರಸ್, ನಟರಾಜ್, ಕುಮಾರ್, ಬಸವರಾಜು, ಕೃಷ್ಣಪ್ಪ, ಮತ್ತಿತರರು ಉಪಸ್ಥಿತರಿದ್ದರು.