ಮೈಸೂರು ನಗರದಲ್ಲಿ ಸಾಂಕ್ರಾಮಿಕ ತಡೆಗೆ ಔಷಧಿ ಸಿಂಪಡಣೆ

ಮೈಸೂರು ನಗರದಲ್ಲಿ ಸಾಂಕ್ರಾಮಿಕ ತಡೆಗೆ ಔಷಧಿ ಸಿಂಪಡಣೆ

HSA   ¦    Mar 26, 2020 03:19:42 PM (IST)
ಮೈಸೂರು ನಗರದಲ್ಲಿ ಸಾಂಕ್ರಾಮಿಕ ತಡೆಗೆ ಔಷಧಿ ಸಿಂಪಡಣೆ

ಮೈಸೂರು: ಕೊರೋನಾದ ಭೀತಿ ನಡುವೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಎಚ್ಚರಿಕೆ ವಹಿಸಿರುವ ಮಹಾನಗರಪಾಲಿಕೆ ಎಲ್ಲ 65 ವಾರ್ಡ್‍ಗಳಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯವನ್ನು ಕೈಗೊಂಡಿದೆ.

ಬೆಳಿಗ್ಗೆ 7 ರಿಂದ 11ಗಂಟೆವರೆಗೆ ಮಹಾನಗರ ಪಾಲಿಕೆ ಅಭಯ ತಂಡ ಸಿಂಪಡಣಾ ಕಾರ್ಯವನ್ನು ನಡೆಸಲಾಗುತ್ತಿದ್ದು, ಈಗಾಗಲೇ ನಗರದ ಕುವೆಂಪುನಗರದ ಜೋಡಿ ರಸ್ತೆಯ ವಿಜಯಾ ಬ್ಯಾಂಕ್ ಸರ್ಕಲ್, ನ್ಯೂ ಕಾಂತರಾಜ ಅರಸ್ ರಸ್ತೆ, ಸರಸ್ವತಿಪುರಂ, ಟಿ.ಕೆ. ಲೇಔಟ್, ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶದ ಪಾರ್ಕ್, ರಸ್ತೆ, ಮೋರಿಗಳು, ಆಕಾಶವಾಣಿ ಸರ್ಕಲ್, ಯಾದವಗಿರಿ, ವಿವಿ ಮೊಹಲ್ಲಾ, ಜಯಲಕ್ಷ್ಮಿಪುರಂ, ಗೋಕುಲಂ, ಪಡುವಾರಹಳ್ಳಿ, ಮೇಟಗಳ್ಳಿ, ಹೆಬ್ಬಾಳು, ವಿಜಯ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸಿಂಪಡಣಾ ಕಾರ್ಯವನ್ನು ಮಾಡಲಾಗಿದೆ.

ಜತೆಗೆ ಕೆಲವೆಡೆ ಜನರು ಹೆಚ್ಚಾಗಿ ಸಂಚರಿಸುವ ಸ್ಥಳ ಮತ್ತು ಎಟಿಎಂ ಕೇಂದ್ರಗಳಲ್ಲೂ ಔಷಧ ಸಿಂಪಡಿಸಿ ಸ್ಯಾನಿಟೇಷನ್ ಕಾರ್ಯವನ್ನು ಮಾಡಲಾಗುತ್ತಿದೆ.

ಇನ್ನು ಮೈಸೂರು ಮಹಾನಗರಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕೆಲಸದ ವೇಳೆಯಲ್ಲಿಯೂ ಒಂದಷ್ಟು ಬದಲಾವಣೆ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದು, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಇದ್ದ ಪೌರ ಕಾರ್ಮಿಕರ ಕೆಲಸದ ಅವಧಿಯನ್ನು ಇನ್ಮುಂದೆ ಪ್ರತಿದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10.30ರವರೆಗೆ ಹಾಗೂ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಇದ್ದ ಒಳಚರಂಡಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ನಿಗದಿಪಡಿಸಿ ಆದೇಶಿಸಿದ್ದಾರೆ.

ಆರೋಗ್ಯದ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಪೌರಕಾರ್ಮಿಕರು ಕಡ್ಡಾಯವಾಗಿ ಹ್ಯಾಂಡ್‍ಗ್ಲೌಸ್, ಮಾಸ್ಕ್, ಬೂಟ್‍ಗಳನ್ನು ಧರಿಸಿಯೇ ಕೆಲಸ ನಿರ್ವಹಿಸುವಂತೆ ನೋಡಿ ಕೊಳ್ಳಬೇಕು. ಅಗತ್ಯ ಇರುವಷ್ಟು ಹ್ಯಾಂಡ್‍ಗ್ಲೌಸ್, ಮಾಸ್ಕ್‍ಗಳನ್ನು ಒದಗಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಅಥವಾ ಲಿಕ್ವಿಡ್ ಸೋಪ್ ನೀಡುವಂತೆಯೂ ಅಲ್ಲದೆ ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರಲ್ಲಿ ಜ್ವರ, ಶೀತ, ಕೆಮ್ಮು ಕಂಡು ಬಂದಲ್ಲಿ ಕೂಡಲೇ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಸಂಬಂಧಿಸಿದ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.