ಮುತ್ತತ್ತಿಯಲ್ಲಿ ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ

ಮುತ್ತತ್ತಿಯಲ್ಲಿ ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ

LK   ¦    Jun 13, 2018 06:00:20 PM (IST)
ಮುತ್ತತ್ತಿಯಲ್ಲಿ ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ

ಮಂಡ್ಯ: ಒಂದಲ್ಲ ಒಂದು ಕಾರಣಕ್ಕೆ ಮಳವಳ್ಳಿ ತಾಲೂಕಿನ ಪ್ರೇಕ್ಷಣೀಯ ತಾಣ ಮುತ್ತತ್ತಿ ಸುದ್ದಿಯಾಗುತ್ತಿದ್ದು, ಇಲ್ಲಿ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.

ಇದೀಗ ಮುತ್ತತ್ತಿಗೆ ಪ್ರವಾಸ ಬಂದಿದ್ದ ವ್ಯಕ್ತಿಯೊಬ್ಬರು ಕಾವೇರಿ ನದಿಯ ದಡದಲ್ಲಿ ಕುಳಿತಿದ್ದಾಗ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಲತಃ ಮಳವಳ್ಳಿ ತಾಲೂಕು, ಕಿರುಗಾವಲು ಗ್ರಾಮದ ವಾಸಿ ಪುಟ್ಟಸ್ವಾಮಿ ಎಂಬುವವರ ಪುತ್ರ ವೆಂಕಟೇಶ್ ಅಲಿಯಾಸ್ ಜಯರಾಮ್(42) ಮೃತಪಟ್ಟ ದುರ್ದೈವಿ.

ಇವರು ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಾಗಿದ್ದು, ಗಾರ್ಮೆಂಟ್ಸ್ ನಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ತನ್ನ ಸ್ನೇಹಿತರಾದ ನರೇಂದ್ರ ಬಾಬು, ಶಿವು, ವಸಂತ, ರಮೇಶ ಅವರೊಂದಿಗೆ ಮುತ್ತತ್ತಿಗೆ ಪ್ರವಾಸಕ್ಕೆಂದು ಬಂದು ದೇವರ ದರ್ಶನ ಪಡೆದು ಮುತ್ತತ್ತಿ ಕಾವೇರಿ ನದಿಯ ದಡದಲ್ಲಿ ಕುಳಿತಿದ್ದ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ಹೆಜ್ಜೇನುಗಳು ಅತಿಯಾಗಿ ಕಡಿದ ಪರಿಣಾಮ ವೆಂಕಟೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಸಾತನೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ನಡುವೆ ಮೃತನ ಪೋಷಕರು ಆತನ ಬಯಕೆಯಂತೆ ಕಣ್ಣುಗಳನ್ನು ದಾನ ಮಾಡಿ ಮನವೀಯತೆ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.