ನಂಜನಗೂಡು ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಏನು?

ನಂಜನಗೂಡು ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಏನು?

Jan 11, 2017 03:33:35 PM (IST)

ಮೈಸೂರು: ನಂಜನಗೂಡು ಉಪ-ಚುನಾವಣೆಗೆ ದಿನಾಂಕ ಘೋಷಣೆಯಾಗದಿದ್ದರೂ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಕ್ಷೇತ್ರದ ಜನರಿಗೆ ಸಾಲ ಭಾಗ್ಯ ಯೋಜನೆಯನ್ನ ಜಾರಿ ಮಾಡುವ ಮೂಲಕ ಉಪ-ಚುನಾವಣೆಯನ್ನ ಗೆಲ್ಲಲು ಕಾಂಗ್ರೆಸ್ ಪಕ್ಷ ಹೊಸ ಸಾಲದ ಮಾಸ್ಟರ್ ಪ್ಲಾನ್ ರೂಪಿಸಿದೆ. ಹಾಗಾದರೇ ಆ ಮಾಸ್ಟರ್ ಪ್ಲಾನ್ ಏನು ಎಂಬುದರ ಡಿಟೈಲ್ಸ್ ಇಲ್ಲಿದೆ ನೋಡಿ.

ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗುವ ಮುನ್ನ ಅಲ್ಲಿನ ಮತದಾರರನ್ನು ಸಂತೃಪ್ತಿಗೊಳಿಸಲು ರಾಜ್ಯ ಸರ್ಕಾರ ಭಾರೀ ಸರ್ಕಸ್ ಮಾಡುತ್ತಿದೆ. ನಂಜನಗೂಡು ಕ್ಷೇತ್ರ ವ್ಯಾಪ್ತಿಗೆ ಸೀಮಿತವಾದಂತೆ ಸುಮಾರು 15 ಸಾವಿರಕ್ಕೂ ಅಧಿಕ ಮಂದಿಗೆ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳಿಂದ ತಲಾ 15 ಸಾವಿರ ರೂಪಾಯಿ ಕಿರುಸಾಲ ವಿತರಿಸಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ.

ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಬಳಸಿಕೊಂಡು ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳಿಗೆ ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಲ ವಿತರಣೆಗೆ ತಯಾರಿಸಿದ್ದ ಪಟ್ಟಿಯೊಂದನ್ನು ಆಧರಿಸಿ ಅಂತಹವರಿಗೆ ಮನೆಗೆ ನೇರವಾಗಿ ಸಾಲದ ಅರ್ಜಿಗಳನ್ನು ಅವರವರ ಮನೆಗಳಿಗೆ ಅಂಚೆ ಮೂಲಕ ನೇರವಾಗಿ ಕಳುಹಿಸಲಾಗಿತ್ತು. ಹೀಗೆ ಅರ್ಜಿ ಪಡೆದ ಫಲಾನುಭವಿಗಳು 10 ರೂಪಾಯಿ ಛಾಪಾ ಕಾಗದದಲ್ಲಿ ಅಫಿಡವಿಟ್ ಸಲ್ಲಿಸಿ, ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗ ಆರಂಭವಾಗಿದೆ.

ನಂಜನಗೂಡು ಕ್ಷೇತ್ರದ ಫಲಾನುಭವಿಗಳು ಮೈಸೂರಿಗೆ ಬಂದು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ. ಮೈಸೂರಿನ ಅಗ್ರಹಾರ ಸಮೀಪ ಹಳೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಸರ್ಕಾರ ಬೈ-ಎಲೆಕ್ಷನ್ನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಭಾಗದ ಜನರಿಗೆ ಆಮಿಷ ಒಡ್ಡುವ ಸಲುವಾಗಿಯೇ ಈ ಕಾರ್ಯಕ್ರಮ ರೂಪಿಸಿದೆ ಎಂಬುದಕ್ಕೆ ಸಾಕ್ಷಿಯಾಗಿ ಅರ್ಜಿ ಸ್ವೀಕರಿಸುತ್ತಿರುವ ಕೇಂದ್ರಕ್ಕೆ ನಾಮಫಲಕವೇ ಇಲ್ಲ. ಯಾವ ಯೋಜನೆಯಡಿ, ಯಾವ ಇಲಾಖೆ ಕಾರ್ಯಕ್ರಮ ರೂಪಿಸಿದೆ ಎಂಬ ಸಣ್ಣ ಮಾಹಿತಿ ಕೂಡ ಇಲ್ಲ. ಆದರೆ ಸರ್ಕಾರ ನಿಯೋಜಿಸಿರುವ ಕೆಲವು ಸಿಬ್ಬಂದಿ ಅರ್ಜಿಯನ್ನು ಸ್ವೀಕರಿಸಿ ಆಯಾ ಬ್ಲಾಕ್ ಗಳ ಅನುಸಾರ ಕಡತಗಳನ್ನು ಪ್ರತ್ಯೇಕಿಸಿಟ್ಟಿದ್ದಾರೆ.

ಯಾವ ರೀತಿ ಸಾಲ: ನಂಜನಗೂಡು ಕ್ಷೇತ್ರದ ಗ್ರಾಮಗಳಿಗೆ ದೇವರಾಜ ಅರಸು ಅಭಿವೃದ್ದಿ ನಿಗಮದ ವತಿಯಿಂದ 15 ಸಾವಿರ ಮಂದಿಗೆ 15 ಸಾವಿರ ಸಾಲ ನೀಡಲಾಗುತ್ತಿದ್ದು, ಇದರಲ್ಲಿ 5 ಸಾವಿರ ಸಬ್ಸಿಡಿ ಸಹ ಸಿಗಲಿದೆ. ಅದಕ್ಕಾಗಿ ನಂಜನಗೂಡು ಕ್ಷೇತ್ರದ ಮತದಾರರು ಮೈಸೂರಿನ ತಾಲ್ಲೂಕು ಕಛೇರಿ ಹಾಗೂ ಅರಸು ಅಭಿವೃದ್ದಿ ಮಂಡಳಿಯ ಮುಂದೆ ಸಾಲುಸಾಲಾಗಿ ಸಾಲ ಪಡೆಯಲು ಅರ್ಜಿ ಸಲ್ಲಿಸಲು ಜನರು ಕ್ಯೂ ನಿಂತಿದೆ. ಈ ಬಗ್ಗೆ ಮಾತನಾಡಿಸಿದಾಗ ಯಾರೂ ಸಾಲದ ಬಗ್ಗೆ ಮಾಹಿತಿ ನೀಡಲು ಹಿಂಜರಿಯುತ್ತಿದ್ದು, ಆದರೆ ಅರ್ಜಿ ಸಲ್ಲಿಸಿದರೆ 15 ಸಾವಿರ ಸಾಲ ನೀಡಲಾಗುವುದು ಎಂದು ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ನಮ್ಮನ್ನ ಕರೆದುಕೊಂಡು ಬಂದಿದ್ದಾರೆ ಎಂದು ಹಾರಿಕೆ ಉತ್ತರ ನಿಡುತ್ತಾರೆ.

ಚುನಾವಣಾ ಗಿಮಿಕ್ಸ್: ಶ್ರೀನಿವಾಸ್ ಪ್ರಸಾದ್ : ಅಭಿವೃದ್ದಿ ಮಾಡಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯಗೆ ಶಕ್ತಿ ಇಲ್ಲ, ಹೇಗಾದರೂ ಮಾಡಿ ನಂಜಗೂಡು ಉಪಚುನಾವಣೆಯಲ್ಲಿ ಗೆಲುವು ಸಾದಿಸಿ ಮರ್ಯಾದಿ ಉಳಿಸಿಕೊಳ್ಳಲು ಈ ರೀತಿ ವಾಮ ಮಾರ್ಗಗಳನ್ನ ಅನುಸರಿಸುತ್ತಿದ್ದು, ಇವೆಲ್ಲಾ ಚುನಾವಣೆ ಗಿಮಿಕ್ಸ್, ಈ ಗಿಮಿಕ್ಸ್ ಗಳೆಲ್ಲಾ ನಂಜಗೂಡಿನಲ್ಲಿ ನಡೆಯುವುದಿಲ್ಲ, ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದು ಮುಂದಿನ ಉಪಚುನಾವಣೆ, ಸಬ್ಸಿಡಿ ವಾರ್ಸಸ್ ಶ್ರೀನಿವಾಸ್ ಪ್ರಸಾದ್ ನಡುವೆ ನಡೆಯಲಿದೆ ಎಂದರು.

More Images