ಮೈಸೂರಲ್ಲಿ ಮತ್ತೊಬ್ಬನಿಗೆ ಕೊರೊನಾ ಸೋಂಕು

ಮೈಸೂರಲ್ಲಿ ಮತ್ತೊಬ್ಬನಿಗೆ ಕೊರೊನಾ ಸೋಂಕು

LK   ¦    Mar 23, 2020 03:09:14 PM (IST)
ಮೈಸೂರಲ್ಲಿ ಮತ್ತೊಬ್ಬನಿಗೆ ಕೊರೊನಾ ಸೋಂಕು

ಮೈಸೂರು: ಅರಮನೆ ನಗರಿ, ನಿವೃತ್ತರ ಸ್ವರ್ಗ ಎಂದೆಲ್ಲ ಕರೆಯಿಸಿಕೊಳ್ಳುತ್ತಿದ್ದ ಮೈಸೂರಿನ ಜನ ಇದೀಗ ಕೊರೊನಾದ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಇದೀಗ ಕೇರಳ ಮೂಲದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು. ಒಟ್ಟಾರೆ ಮೈಸೂರಿನಲ್ಲಿ ಕೊರೋನ ಸೋಂಕಿತ ಎರಡು ಪ್ರಕರಣಗಳು ದೃಢಪಟ್ಟಂತಾಗಿದೆ.

ಕೊರೊನಾ ಕುರಿತಂತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡುತ್ತಿದ್ದರೂ ಜನ ಎಚ್ಚೆತ್ತುಕೊಳ್ಳದಿರುವುದು ಮತ್ತಷ್ಟು ಭಯಕ್ಕೀಡು ಮಾಡಿದೆ. ಜಿಲ್ಲೆಯಲ್ಲಿ ಎರಡನೇ ಕೊರೊನಾ ಸೋಂಕು ದೃಢವಾಗಿರುವ ಬಗ್ಗೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಮಾಹಿತಿ ನೀಡಿದ್ದು, ಸೋಂಕಿತ ವ್ಯಕ್ತಿ  ಮಾ.21ರಂದು ಬೆಂಗಳೂರು ಏರ್ ಫೋರ್ಟ್ ಗೆ ಆಗಮಿಸಿ, ಅಲ್ಲಿಂದ ಮೈಸೂರಿಗೆ ಟ್ಯಾಕ್ಸಿಯಲ್ಲಿ ಬಂದಿದ್ದಾನೆ. ಮಾರ್ಗ ಮಧ್ಯೆ ಮಂಡ್ಯ ಬಳಿ ಟೀ ಕುಡಿದಿರುವುದು, ಮೈಸೂರಿನ ಮೀನಾ ಬಜಾರ್ ಬಳಿ ಕೆಲ ಕಾಲ ಸುತ್ತಾಟ ನಡೆಸಿರುವುದು ಬೆಳಕಿಗೆ ಬಂದಿದೆ.

ಈತ ಕೇರಳದವನಾಗಿದ್ದು, ಬೆಂಗಳೂರಿನಿಂದ ಮೈಸೂರು ಮೂಲಕ ಕೇರಳಕ್ಕೆ ತೆರಳುವ ಸಲುವಾಗಿ ಮೈಸೂರಿಗೆ ಬಂದಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸದ್ಯ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಆತ 40 ರಿಂದ 45 ವಯಸ್ಸಿನವನಾಗಿದ್ದು, ಮಾ.21ರಂದು ಅರಬ್ ಎಮಿರೇಟ್ಸ್ ನಿಂದ ಕೊನೆ ವಿಮಾನದಲ್ಲಿ ಬಂದಿದ್ದು, ಮೈಸೂರಿನ ಮೀನಾ ಬಜಾರ್ ನಲ್ಲಿನ ಸಂಬಂಧಿಕರ ಮನೆಗೆ ತೆರಳಿರುವುದು ಗೊತ್ತಾಗಿದೆ.

ಮೈಸೂರು ಪೊಲೀಸ್ ಕಮೀಷನರ್ ಚಂದ್ರಗುಪ್ತ ಮಾತನಾಡಿ ಅನವಶ್ಯಕ ವಾಗಿ ಮನೆ ಬಿಟ್ಟು ಹೊರಗೆ ಬರುವ ವ್ಯಕ್ತಿಗಳಿಗೆ ಜಾಮೀನು ರಹಿತ ಕ್ರಿಮಿ ನಲ್ ಕೇಸ್ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಚೀನಾ ವ್ಯಕ್ತಿ ಮೈಸೂರಿನಲ್ಲಿರುವ ಕುರಿತು ಮಾಹಿತಿ ನೀಡಿದ ಅವರು, ಆತ ಒಂದೂವರೆ ವರ್ಷದಿಂದ ಮೈಸೂರಿನಲ್ಲೇ ಇದ್ದಾರೆ. ಅವರಿಗೆ ಯಾವ ಸೋಂಕು ತಗುಲಿಲ್ಲ. ಅವರು ಚೀನಾಕ್ಕೂ ಹೋಗಿಲ್ಲ. ಆಟೋ ಸೇವೆ, ಪ್ರಯಾಣಿಕರನ್ನು ಹೊತ್ತ ಕ್ಯಾಬ್ ಆಟೋ ನಿಷೇಧಿಸಲಾಗಿದೆ. ನಿರ್ಬಂಧಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು. ಮಾ.31ರವರೆಗೆ ಅನಗತ್ಯವಾಗಿ ಮನೆಯಿಂದ ಯಾರೂ ಹೊರಗೆ ಬರಬಾರದು. ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ. ಹೋಟೆಲ್ ಗಳಲ್ಲಿ ಕೂರಲು ಅವಕಾಶ ಕೊಡ್ತಿರೋದಕ್ಕೂ ನಿರ್ಬಂಧ ವಿಧಿಸಲಾಗಿದೆ. ಆಟೋಗಳಲ್ಲಿ ಹೆಚ್ಚಿನ ಮಂದಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ.

ಅಂಗಡಿ ಮುಂಗಟ್ಟು ತೆರೆದರೆ ಕ್ರಮ

ಯಾವುದೋ ಅನಗತ್ಯ ಅಂಗಡಿ ಮುಂಗಟ್ಟುಗಳನ್ನು ತೆರೆದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇವೆ. ಎಂದಿರುವ ಅವರು, ಬೆಂಗಳೂರಿನಿಂದ ರಸ್ತೆ ಮೂಲಕ ಮೈಸೂರಿಗೆ   ಬರುವ ಎಲ್ಲಾ ಸಾರ್ವಜನಿಕರ ತಪಾಸಣೆ ಮಾಡಲಾಗುತ್ತಿದೆ. ಚೆಕ್ ಪೋಸ್ಟ್ ಬಳಿ ಕಡ್ಡಾಯ ತಪಾಸಣೆ ಮಾಡಲಾಗುತ್ತಿದ್ದು, ಜನ ವಿನಾಕಾರಣ ರಸ್ತೆಗೆ ಬರಬೇಡಿ. ಇಂದಿನಿಂದ  ಖಾಸಗಿ ಆಟೋ, ಓಲಾ, ಉಬರ್ ವಾಹನ ಸ್ಥಗಿತ ಗೊಳಿಸಲಾಗುವುದು. ಅಲ್ಲದೆ, ಖಾಸಗಿ ವಾಹನ ತಪಾಸಣೆ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.