ಬಡವರ ಬದುಕಿನೊಂದಿಗೆ ಕೊರೋನಾ ಚೆಲ್ಲಾಟ!

ಬಡವರ ಬದುಕಿನೊಂದಿಗೆ ಕೊರೋನಾ ಚೆಲ್ಲಾಟ!

LK   ¦    Mar 18, 2020 12:28:07 PM (IST)
ಬಡವರ ಬದುಕಿನೊಂದಿಗೆ ಕೊರೋನಾ ಚೆಲ್ಲಾಟ!

ಮೈಸೂರು: ಕೊರೋನಾ ಅದ್ಯಾವ ಮಟ್ಟಿಗೆ ಜನರನ್ನು ಭೀತಿಗೊಳಪಡಿಸಿದೆ ಎಂದರೆ ತಮಗೇನು ಬೇಡ ಸದ್ಯಕ್ಕೆ ವೈರಸ್ ತಮ್ಮನ್ನು ತಾಕದೆ ಆರೋಗ್ಯವಾಗಿ ಉಳಿದು ಬಿಟ್ಟರೆ ಸಾಕಪ್ಪಾ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ.

ಬಹಳಷ್ಟು ಮಂದಿ ಮಾಂಸಾಹಾರ, ರಸ್ತೆ ಬದಿ ತಿನಿಸು, ಗೋಬಿ, ಚುರುಮುರಿ ಸೇರಿದಂತೆ ಬಹುತೇಕ ತಿಂಡಿ ತಿನಿಸುಗಳನ್ನೆಲ್ಲ ಬಿಟ್ಟು ಬಿಟ್ಟಿದ್ದಾರೆ. ಇನ್ನು ಕೆಲವರು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಬೇಸಿಗೆಯ ದಿನಗಳಲ್ಲಿ ವೀಕೆಂಡ್ ಮೋಜು ಮಸ್ತಿಗೆ ಒಂದಷ್ಟು ಮಂದಿ ಕಡಿವಾಣ ಹಾಕಿದ್ದಾರೆ.

ಇದೆಲ್ಲದರಿಂದ ಬಹುತೇಕ ವ್ಯಾಪಾರಗಳು ಕುಂಠಿತಗೊಂಡಿದೆ. ಜನಸಂದಣಿ ಪ್ರದೇಶಗಳಿಗೆ ಹೆಚ್ಚಾಗಿ ಜನ ಹೋಗುತ್ತಿಲ್ಲ. ಸಂತೆಗಳಿಗೂ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಯಾರ ಮುಖದಲ್ಲಿಯೂ ನೆಮ್ಮದಿಯಿಲ್ಲ. ಒಂದೆಡೆ ರೋಗದ ಭಯ ಮತ್ತೊಂದೆಡೆ ಹೊತ್ತಿನ ಕೂಳಿನ ಚಿಂತೆ.

ಬಹಳಷ್ಟು ಜನ ಬೇಸಿಗೆಯ ದಿನಗಳಲ್ಲಿ ಒಳ್ಳೆಯ ವ್ಯಾಪಾರವಾಗುತ್ತದೆ ಎಂಬ ನಂಬಿಕೆಯಿಂದ ಸಾಲ ಮಾಡಿ ಬಂಡವಾಳ ಹೂಡಿ ತಂಪುಪಾನೀಯ, ಐಸ್‌ಕ್ರೀಮ್, ಜ್ಯೂಸ್ ಅಂಗಡಿಗಳನ್ನು ಮಾಡಿದ್ದರೆ, ಮತ್ತೆ ಕೆಲವು ಚಾಲಕರು ಪ್ರವಾಸಿಗರು ಬರುತ್ತಾರೆ ಒಂದಷ್ಟು ದುಡಿಮೆಯಾಗುತ್ತದೆ ಎಂಬ ಧೈರ್ಯದಿಂದ ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಮುಖ್ಯವಾಗಿ ಸರ್ಕಾರದ ಆದೇಶದಂತೆ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ. ಜತೆಗೆ ಕೊರೋನಾದ ಭಯದಿಂದಾಗಿ ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಿಲ್ಲ.

ಇವತ್ತಿನ ಪರಿಸ್ಥಿತಿಯಲ್ಲಿ ತಮ್ಮ ದೈನಂದಿನ ಅಗತ್ಯ ಖರ್ಚುಗಳನ್ನೇ ನಿಭಾಯಿಸಲು ಸಾಧ್ಯವಾಗದ ಪರಿಸ್ಥಿತಿ ಇರುವಾಗ ಸಾಲದ ಕಂತುಗಳನ್ನು ಕಟ್ಟುವುದಾದರೂ ಹೇಗೆಂಬ ಚಿಂತೆ ಸಾಲಗಾರರನ್ನು ಕಾಡುತ್ತಿದೆ. ಮೈಸೂರಿನಂತಹ ಪ್ರವಾಸಿ ತಾಣಗಳಲ್ಲಿ ಸದಾ ಪ್ರವಾಸಿಗರು ಕಾಣಿಸುತ್ತಿದ್ದರು. ಅವರನ್ನು ನಂಬಿಕೊಂಡು ಟ್ಯಾಕ್ಸಿ ಉದ್ಯಮ ನಡೆಯುತ್ತಿತ್ತು. ಆದರೆ ಈಗ ಯಾರಿಗೂ ಟ್ಯಾಕ್ಸಿ ಬೇಡವಾಗಿದೆ. ಆದರೆ ವ್ಯಾಪಾರ ವಹಿವಾಟು ಕುಸಿದಿದೆ ಎಂಬ ಕಾರಣಕ್ಕೆ ಯಾವುದೇ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿ ವಿಚಾರದಲ್ಲಿ ವಿನಾಯಿತಿ ತೋರುತ್ತಿಲ್ಲ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಸಾಲ ಮರುಪಾವತಿಗೆ ವಿನಾಯಿತಿ ನೀಡಬೇಕೆಂದು ಇದೀಗ  ಮೈಸೂರಿನಲ್ಲಿ ಟ್ಯಾಕ್ಸಿ ಚಾಲಕರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಟ್ಯಾಕ್ಸಿ ಚಾಲಕರು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು, ತಾವು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದೆವು. ಸಾಲದ ಕಂತನ್ನು ಇಲ್ಲಿವರೆಗೆ ಮರುಪಾವತಿ ಮಾಡಿಕೊಂಡು ಬಂದಿದ್ದೆವು. ಆದರೆ ಈಗ ವಾಹನಗಳನ್ನು ರಸ್ತೆಗಿಳಿಸದ  ಪರಿಸ್ಥಿತಿ ಬಂದಿದೆ. ದೈನಂದಿನ ಜೀವನ ಮಾಡುವುದೇ ಕಷ್ಟವಾಗಿದ್ದು, ಸಂಕಷ್ಟದಲ್ಲಿದ್ದೇವೆ. ಯಾವುದೇ ರೀತಿಯ ಸಂಪಾದನೆಯಿಲ್ಲದೆ ನಷ್ಟಕ್ಕೊಳಗಾಗಿದ್ದೇವೆ. ಹೀಗಾಗಿ ನಾವು ನಿಗದಿತ ಅವಧಿಯೊಳಗೆ ಸಾಲದ ಕಂತು ಮರುಪಾವತಿ ಮಾಡದೆ ಇದ್ದರೆ ಹಣಕಾಸು ಸಂಸ್ಥೆಗಳು ವಾಹನನಗಳನ್ನು ವಶಪಡಿಸಿಕೊಳ್ಳುತ್ತಾರೆ. ನಾವು ಸಾಲಕಟ್ಟಲು ಸಿದ್ಧರಿದ್ದೇವೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಕಷ್ಟವಾಗಿದ್ದು ಎರಡು ಅಥವಾ ಮೂರು ತಿಂಗಳ ಕಾಲ ವಿನಾಯಿತಿ ನೀಡುವಂತೆ ಚಾಲಕರು ಮನವಿ ಮಾಡಿಕೊಂಡಿದ್ದಾರೆ.

ಹಾಗೆನೋಡಿದರೆ ಇದು ಕೇವಲ ಟ್ಯಾಕ್ಸಿ ಚಾಲಕರದ್ದು ಮಾತ್ರ ಸಮಸ್ಯೆಯಲ್ಲ. ಆಟೋ ಚಾಲಕರು ಸೇರಿದಂತೆ ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಬಹುತೇಕ ಮಂದಿ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಚಿಂತೆಗೊಳಗಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಯಾರೂ ಕೂಡ ನೆಮ್ಮದಿಯಾಗಿಲ್ಲ. ಒಟ್ಟಾರೆ ಹೇಳಬೇಕೆಂದರೆ ಕೊರೋನಾ ತೊಲಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುವ ತನಕ ಸಮಸ್ಯೆ ತಪ್ಪಿದಲ್ಲ. ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಿ ಪ್ರಾಣ ಉಳಿಸಿಕೊಳ್ಳುವುದು ಒಂದೆಡೆಯಾದರೆ, ಮತ್ತೊಂದೆಡೆ ಪ್ರಾಣ ಉಳಿಯಲು ಹೊತ್ತಿನ ಕೂಳನ್ನು ಸಂಪಾದಿಸುವುದು ಕೂಡ ಕಷ್ಟವಾಗಿ ಪರಿಣಮಿಸಿದೆ.