ಮಳವಳ್ಳಿ ಸಾರಿಗೆ ಡಿಪೋ ನೌಕರ ಆತ್ಮಹತ್ಯೆ: ಪ್ರತಿಭಟನೆ

ಮಳವಳ್ಳಿ ಸಾರಿಗೆ ಡಿಪೋ ನೌಕರ ಆತ್ಮಹತ್ಯೆ: ಪ್ರತಿಭಟನೆ

MY   ¦    Dec 06, 2018 05:02:15 PM (IST)
ಮಳವಳ್ಳಿ ಸಾರಿಗೆ ಡಿಪೋ ನೌಕರ ಆತ್ಮಹತ್ಯೆ: ಪ್ರತಿಭಟನೆ

ಮಂಡ್ಯ: ಸಾರಿಗೆ ನೌಕರನೊಬ್ಬ ಅಧಿಕಾರಿಗಳ ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಮೃತನ ಕುಟುಂಬದವರು ಮತ್ತು ಗ್ರಾಮಸ್ಥರು ಗುರುವಾರ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಮಳವಳ್ಳಿ ಸಾರಿಗೆ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್.ಲೋಕೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾರೆ. ಇವರ ಆತ್ಮಹತ್ಯೆಗೆ ಮಳವಳ್ಳಿ ಸಾರಿಗೆ ಡಿಪೋ ವ್ಯವಸ್ಥಾಪಕ ಶಾಂತಕುಮಾರ್, ಮಂಡ್ಯ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಹೇಶ್, ನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ತಾಳಶಾಸನ ಮೋಹನ್, ಮಳವಳ್ಳಿ ಘಟಕದ ಎಡಬ್ಲ್ಯೂಎಸ್ ಕುಮಾರನಾಯಕ್, ಭದ್ರತಾ ಹವಾಲ್ದಾರ್ ಸಿದ್ದರಾಜು ಎಂಬುವರೇ ಕಾರಣರಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಆಸ್ಪತ್ರೆ ಮುಂಭಾಗದ ಬೆಂಗಳೂರು-ಮೈಸೂರು ಹೆದ್ದಾರಿಗಿಳಿದು ಪ್ರತಿಭಟಿಸಿದ್ದಾರೆ. ಇದರಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಭೇಟಿ ನೀಡಿ ಕುಟುಂಬದವರಿಗೆ ಹೆದ್ದಾರಿ ರಸ್ತೆ ತಡೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿಗೇ ಬರುವಂತೆ ಮನವಿ ಮಾಡಿದರು.

ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿ ಬಳಿ ಧಾವಿಸಿ ಧರಣಿ ಕುಳಿತು, ಸಾರಿಗೆ ನೌಕರ ಎನ್. ಲೋಕೇಶ್ ಸಾವಿಗೆ ಕಾರಣರಾದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಕುಟುಂಬದವರ ಅಹವಾಲು ಆಲಿಸಿದ ಸಚಿವ ಸಿ.ಎಸ್. ಪುಟ್ಟರಾಜು ಅವರು ಸ್ಥಳದಲ್ಲೇ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರನ್ನು ಸಂಪರ್ಕಿಸಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ 3 ಲಕ್ಷ ಪರಿಹಾರ ನೀಡುವುದು, ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ನೀಡುವುದು, ಸರ್ಕಾರದ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.