ನಂಜನಗೂಡು ಬಳಿ ರೈತರಿಗೆ ಚಿರತೆ ಭಯ

ನಂಜನಗೂಡು ಬಳಿ ರೈತರಿಗೆ ಚಿರತೆ ಭಯ

LK   ¦    Feb 12, 2018 07:02:21 PM (IST)
ನಂಜನಗೂಡು ಬಳಿ ರೈತರಿಗೆ ಚಿರತೆ ಭಯ

ಮೈಸೂರು: ನಂಜನಗೂಡಿನ ಚುಂಚನಹಳ್ಳಿ ಮತ್ತು ಕೋಣನೂರು ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಸಾಕು ನಾಯಿಗಳನ್ನು ಹಿಡಿದು ಕೊಂದು ಹಾಕುತ್ತಿದ್ದು, ಗ್ರಾಮಸ್ಥರು ಆಂತಕಗೊಂಡಿದ್ದಾರೆ.

ಚುಂಚನಹಳ್ಳಿ ಗ್ರಾಮದ ಸಿದ್ದೇಶ್ವರ ಬಡಾವಣೆಯ ಸಿದ್ದರಾಜಪ್ಪ ಎಂಬುವವರ ತೋಟದ ಮನೆಯಲ್ಲಿದ್ದ ಸಾಕು ನಾಯಿಯೊಂದನ್ನು ಭಾನುವಾರ ರಾತ್ರಿ ದಾಳಿ ಮಾಡಿ ಕೊಂದು ಎಳೆದ್ಯೊಯ್ದು ಅರ್ಧ ಭಾಗವನ್ನು ತಿಂದು ಪರಾರಿಯಾಗಿದೆ.

ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ದನ-ಕರುಗಳು ಮತ್ತು ಮೇಕೆಗಳನ್ನು ತಿನ್ನಲು ಬಂದ ಚಿರತೆ ನಾಯಿಯನ್ನು ತಿಂದು ಹೋಗಿರುವುದರಿಂದ ಈಗ ರೈತರಿಗೆ ಭಯ ಆರಂಭವಾಗಿದೆ.

ಜಮೀನಿನ ಸುತ್ತಲು ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದೆ. ಕಳೆದ ಕೆಲವು ಸಮಯಗಳ ಹಿಂದೆ ಕೊಣನೂರು ಗ್ರಾಮದ ತೋಟದ ಮನೆಯಲ್ಲೂ ಇದೇ ರೀತಿ ನಾಯಿಯನ್ನು ಹೊತ್ತೊಯ್ದಿತ್ತು ಎನ್ನಲಾಗಿದೆ.

ಚಿರತೆ ಇರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ದನ-ಕರುಗಳನ್ನು ಮೇಯಿಸಲು, ಜಮೀನಿನ ಕಡೆ ತೆರಳಲು ಹೆದರುತ್ತಿದ್ದಾರೆ. ಅಲ್ಲದೆ ಚಿರತೆ ಸೆರೆ ಹಿಡಿಯಲು ಬೋನನ್ನು ಇಡಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.