ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

LK   ¦    Jan 11, 2018 07:46:31 PM (IST)
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮಂಡ್ಯ: ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲು ಸರ್ವೇ ನಂ.1ರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಂಡ್ಯ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಆರ್ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 8 ಮಂದಿ ವಿರುದ್ಧ ಐಪಿಸಿ 200ರಡಿ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಂ. ನಾಗಭೂಷಣ್, ಸಂಸದ ಸಿ.ಎಸ್. ಪುಟ್ಟರಾಜು, ನಾಗಮ್ಮ ಪುಟ್ಟರಾಜು, ವರಲಕ್ಷ್ಮಿ ಸಿ.ಎಸ್. ತಿಬ್ಬೇಗೌಡ, ಸಿ. ಶಿವಕುಮಾರ್, ಸಿ. ಅಶೋಕ್, ಬಿ.ಎಂ. ನಟರಾಜು ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ.

ಬೇಬಿ ಬೆಟ್ಟದ ಕಾವಲು ಸರ್ವೇ ನಂ.1ರಲ್ಲಿರುವ 1623.07 ಎಕರೆ ಜಮೀನು ಮೈಸೂರು ಸಂಸ್ಥಾನದ ಮಹಾರಾಜಿಗೆ ಸೇರಿದ್ದಾಗಿದೆ. 1968-69ರಿಂದ ಸದರಿ ಆರ್ಟಿಸಿಯಲ್ಲಿ 601.02 ಹೆಕ್ಟೇರ್ ಜಮೀನು ಇದ್ದು, ಮಣ್ಣಿನ ನಮೂನೆ ಕೆಂಪು ಎಂದು ದಾಖಲಾಗಿದೆ. ಆರ್ ಟಿಸಿ ಕಲಂ 6ರಲ್ಲಿ ಪಟ್ಟಾ ಎಂದು ಕೈ ಬರವಣಿಗೆಯಲ್ಲಿ ಬರೆದಿರುವುದನ್ನು ಅಳಿಸಿ, ನಂತರ ಈ ದಾಖಲೆಯನ್ನು ಸರ್ಕಾರಿ ಎಂದು ಬರೆಯಲಾಗಿದೆ. ಬಳಿಕ ಪಟ್ಟಾ ಮತ್ತು ಸರ್ಕಾರಿ ಎಂದು ಎರಡು ರೀತಿಯಲ್ಲಿ ದಾಖಲಿಸಿ ಬಿ ವರ್ಗಕ್ಕೆ ಸೇರಿಸಿ 4 ರಿಂದ 8ನೇ ಆರೋಪಿಗಳಾದ ನಾಗಮ್ಮ ಪುಟ್ಟರಾಜು, ವರಲಕ್ಷ್ಮಿ ಸಿ.ಎಸ್. ತಿಬ್ಬೇಗೌಡ, ಸಿ. ಶಿವಕುಮಾರ್, ಸಿ. ಅಶೋಕ್, ಬಿ.ಎಂ. ನಟರಾಜು ಅವರಿಗೆ ಕಲ್ಲು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿದೆ.

ಈ ಜಮೀನು ಮೈಸೂರು ಮಹಾರಾಜರು ಅಮೃತ್ ಮಹಲ್ ಕಾವಲ್ ತಳಿ ರಾಸುಗಳ ಅಭಿವೃದ್ಧಿಪಡಿಸಲು ಉಪಯೋಗಿಸುತ್ತಿದ್ದ ಹುಲ್ಲುಗಾವಲು ಪ್ರದೇಶವಾಗಿತ್ತು. 3ರಿಂದ 8ನೇ ಆರೋಪಿಗಳು ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ, ಅಧಿಕಾರಿಗಳಿಂದ ಲೈಸೆನ್ಸ್ ಪಡೆದು ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಮೊದಲನೇ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2010ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಇವರ ಆಪ್ತರಾಗಿದ್ದ 8ನೇ ಆರೋಪಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ. ನಟರಾಜು ಅವರ ಒಡೆತನದ ಯತಿನ್ ಸ್ಟೋನ್ ಕ್ರಷರ್ ಹಾಗೂ ಕಲ್ಲುಗಣಿಗಾರಿಕೆಯ ಪ್ರಾರಂಭೋತ್ಸವವನ್ನು ನೆರವೇರಿಸಿದ್ದಾರೆ.

ಅಲ್ಲದೆ, 2014ರ ಫೆ.24ರಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಂಡ್ಯ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾದಿಕಾರಿ, ಮಂಡ್ಯ ವಿಭಾಗ ಪ್ರಾದೇಶಿಕ ಆಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಮೈಸೂರು ಪ್ರಾದೇಶಿಕ ಆಯುಕ್ತರ ಮುಖಾಂತರ ಕಲ್ಲುಪುಡಿ ಮಾಡುವ ಘಟಕಗಳಿಗೆ ಬೇಕಾಗಿರುವ ಕಚ್ಚಾ ಮಾಲಿನ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದ್ದಾರೆ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೈಸೂರು ಮಹಾರಾಜರ ಖಾಸಗಿ ಸ್ವತ್ತನ್ನು ಗಣಿಗಾರಿಕೆ ನಡೆಸಲು ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದಾರೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಡ್ಯ ವಿಭಾಗ, ಮೈಸೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ 2014ರ ಫೆ.25ರಂದು ಬರೆದಿರುವ ಪತ್ರದಲ್ಲಿ ಸಾಬೀತಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ.

3ನೇ ಆರೋಪಿಯಾಗಿರುವ ಸಂಸದ ಸಿ.ಎಸ್.ಪುಟ್ಟರಾಜು ಅವರು ಆರ್ಟಿಸಿಯಲ್ಲಿ ಪಟ್ಟಾ ಎಂದು ಬರೆದಿದ್ದನ್ನು ಅಳಿಸಿ ಸರ್ಕಾರಿ ಎಂದು ನಮೂದಿಸುವಂತೆ ಪ್ರಭಾವ ಬೀರಿ ಎಸ್.ಟಿ.ಜಿ. ಸ್ಟೋನ್ ಕ್ರಷರ್ಗೆ ಖಾತೆ ಮತ್ತು ಲೈಸನ್ಸ್ ಪಡೆದಿದ್ದಾರೆ. 4ನೇ ಆರೋಪಿ ನಾಗಮ್ಮ ಅವರು ಸಂಸದ ಪುಟ್ಟರಾಜು ಅವರ ಪತ್ನಿಯಾಗಿದ್ದಾರೆ. ಇದರಲ್ಲಿ 1ನೇ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿಕರೂ ಸೇರಿದ್ದಾರೆ.

More Images