ಮೈಸೂರು ಅರಮನೆ ಅಂಗಳದಲ್ಲಿ ಗಜಪಡೆಗೆ ರಾಜಾತಿಥ್ಯ  

ಮೈಸೂರು ಅರಮನೆ ಅಂಗಳದಲ್ಲಿ ಗಜಪಡೆಗೆ ರಾಜಾತಿಥ್ಯ  

MY   ¦    Sep 08, 2019 06:52:19 PM (IST)
ಮೈಸೂರು ಅರಮನೆ ಅಂಗಳದಲ್ಲಿ ಗಜಪಡೆಗೆ ರಾಜಾತಿಥ್ಯ   

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯ ರೂವಾರಿಗಳಾದ ಗಜಪಡೆಯ ಪೈಕಿ ಮೊದಲ ಹಂತದ ಗಜಪಡೆ ಈಗಾಗಲೇ ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡಿದ್ದು ಅವುಗಳಿಗೆ  ರಾಜಾತಿಥ್ಯ ನಡೆಯುತ್ತಿದ್ದು, ಪ್ರತಿದಿನ ಎರಡು ಬಾರಿ ಪೌಷ್ಠಿಕ ಆಹಾರ ನೀಡುವ ಮೂಲಕ ಗಜಪಡೆಯನ್ನು ಸರ್ವ ರೀತಿಯಲ್ಲಿ ಜಂಬೂ ಸವಾರಿಗೆ ತಯಾರುಗೊಳಿಸಲಾಗುತ್ತಿದೆ.

 ಈಗಾಗಲೇ ತಾಲೀಮು ಆರಂಭವಾಗಿದ್ದು, ಸದ್ಯ ಭಾರದ ತಾಲೀಮು ನಡೆಯುತ್ತಿದೆ. ದಿನ ಕಳೆದಂತೆ ಗಜಪಡೆಗಳ ತಾಲೀಮು ಕಠಿಣವಾಗುತ್ತಾ ಹೋಗಲಿದ್ದು, ಇವುಗಳು ಬಲಿಷ್ಠವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಾದರೆ ಅವುಗಳಿಗೆ ಪೌಷ್ಠಿಕ ಆಹಾರವನ್ನು ನೀಡಬೇಕಾಗುತ್ತದೆ. ಅದರಲ್ಲೂ ದಸರಾ ಆನೆಗಳಿಗೆ ಮಾಮೂಲಿ ಆನೆ ಶಿಬಿರಗಳಲ್ಲಿ ನೀಡುವಂತೆ ಆಹಾರವನ್ನು ನೀಡದೆ ಪ್ರತ್ಯೇಕವಾದ ಆರೋಗ್ಯಯುತ, ಪೌಷ್ಠಿಕಾಂಶಗಳನ್ನೊಳಗೊಂಡ ಭೂರಿ ಬೋಜನ ನೀಡಲಾಗುತ್ತದೆ. 

ಇವುಗಳ ದಿನಚರಿ ಹೇಗಿರುತ್ತದೆ ಎಂದರೆ, ಆನೆಗಳಿಗೆ ಪ್ರತಿನಿತ್ಯ ಮುಂಜಾನೆ 5.30ಕ್ಕೆ ಹಾಗೂ ಸಂಜೆ 4 ಗಂಟೆಗೆ ಶಕ್ತಿ ವೃದ್ಧಿಸುವ, ಮೈಕಟ್ಟು ಅರಳಿಸುವ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲ ಅಕ್ಕಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತಿದ್ದು ಇದನ್ನು ನೋಡಿಕೊಳ್ಳಲೆಂದೇ  ಉಸ್ತುವಾರಿಯಾಗಿ  ಪಶುವೈದ್ಯರ ಸಹಾಯಕ ರಂಗರಾಜು ಅವರನ್ನೇ ಆಹಾರ ತಯಾರಿಕೆಗೆ ನೇಮಿಸಲಾಗಿದೆ. 

ಇನ್ನು ಪ್ರತಿ ದಿನ ಬೆಳಗ್ಗೆ 10.30ಕ್ಕೆ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿಯಿರುವ ಅಡುಗೆ ಮನೆಯಲ್ಲಿ ಆನೆಗಳಿಗೆ ವಿಶೇಷ ಆಹಾರ ತಯಾರಿಸಲಾಗುತ್ತಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿಯನ್ನು ಬೇಯಿಸಲಾಗುತ್ತದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಬಲ ಅಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ. ಎರಡೂವರೆ ಗಂಟೆಗಳ ಕಾಲ ಬೇಯಿಸಿದ ನಂತರ ಒಂದು ಗಂಟೆ ಹಾಗೆಯೇ ಇಡಲಾಗುತ್ತದೆ. ಬೇಯಿಸಿದ ಧಾನ್ಯಗಳನ್ನು ಮಧ್ಯಾಹ್ನ 3.30ಕ್ಕೆ ಟ್ರೇಗೆ ಹಾಕಿ ಮುದ್ದೆಯಾಗಿ ಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಹೋಗುವ ಮುನ್ನ ನೀಡಲಾಗುತ್ತದೆ. 

ಸಂಜೆ ತಾಲೀಮು ಮುಗಿಸಿ ಬಂದ ನಂತರ ರಾತ್ರಿ 7ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥಗಳನ್ನು ಬೇಯಿಸಲಾಗುತ್ತದೆ. ರಾತ್ರಿ 9ರ ನಂತರ ಬೇಯಿಸಿದ ಆಹಾರ ಪದಾರ್ಥವನ್ನು ದಾಸ್ತಾನು ಕೊಠಡಿಯಲ್ಲಿಟ್ಟು ಬೀಗ ಹಾಕಿ ಸುರಕ್ಷಿತವಾಗಿಡಲಾಗುತ್ತದೆ. ಆ ಆಹಾರವನ್ನು ಮುಂಜಾನೆ 5ಕ್ಕೆ ಪಾತ್ರೆಯಿಂದ ತೆಗೆದು ಮುದ್ದೆ ಕಟ್ಟಿ 5.30ರಿಂದ 6.30ರ ಒಳಗೆ ಎಲ್ಲಾ ಆನೆಗಳಿಗೂ ನೀಡಲಾಗುತ್ತದೆ. ಬಳಿಕ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಾಗುತ್ತದೆ. ಪ್ರತಿದಿನ ಒಂದೊಂದು ಆನೆಗೆ ಮೂರು ಕೆಜಿ ಪೌಷ್ಟಿಕ  ಆಹಾರ ನೀಡಲಾಗುತ್ತದೆ. ನಂತರ ದಿನದಿಂದ ಅವುಗಳ ಪ್ರಮಾಣ ಹೆಚ್ಚಿಸಲಾಗುತ್ತದೆ. 

ಮಧ್ಯಾಹ್ನದ ವೇಳೆ ಆನೆಗಳಿಗೆ ಸುಮಾರು 35 ಕೆಜಿ ಕುಸುರೆ ನೀಡಲಾಗುತ್ತಿದೆ. ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಇಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿ(ಕುಸುರೆ) ಆನೆಗಳಿಗೆ ನೀಡಲಾಗುತ್ತಿದೆ. ಆನೆಗಳು ಪ್ರತಿ ದಿನ ಮೂರು ಬಾರಿ ದಿನವೊಂದಕ್ಕೆ ಒಟ್ಟು 250ರಿಂದ 300 ಲೀಟರ್ ನೀರು ಕುಡಿಯುತ್ತವೆ. ಮುಂಜಾನೆ 5.30ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರು ಕುಡಿಸಲಾಗುತ್ತದೆ. 

ಆಹಾರದ ಪ್ರಮಾಣ: ಮೊದಲ ಹಾಗೂ ಎರಡನೇ ತಂಡದ ಆನೆಗಳಿಗೆ ಪ್ರತಿ ದಿನ ಎರಡು ಬಾರಿ ಆಹಾರ ಪದಾರ್ಥ ನೀಡಲು 70 ಕೆ.ಜಿ. ಹಸಿರು ಕಾಳು, 70 ಕೆಜಿ ಉದ್ದಿನಕಾಳು, 70 ಕೆಜಿ ಕುಸುಬುಲು ಅಕ್ಕಿ, 70 ಕೆಜಿ ಗೋದಿಯನ್ನು ಬೇಯಿಸಲಾಗುತ್ತದೆ. ಅಲ್ಲದೆ  70 ಕೆಜಿ ಕ್ಯಾರೆಟ್, 70 ಕೆಜಿ ಬೀಟ್‍ರೂಟ್,  70 ಕೆಜಿ ಮೂಲಂಗಿ, 70 ಕೆಜಿ ಗೆಡ್ಡೆಕೋಸು, 70 ಕೆಜಿ ಸೌತೆಕಾಯಿ ಕತ್ತರಿಸಿ ಆನೆಗಳಿಗೆ ನೀಡಲಾಗುತ್ತದೆ. ಪ್ರತಿ ಆನೆಗೆ ಒಂದು ಟೈಮ್‍ಗೆ  15 ರಿಂದ 25 ಕೆಜಿ ಪೌಷ್ಟಿಕ  ಆಹಾರ ಪದಾರ್ಥ ನೀಡಲಾಗುತ್ತದೆ. ಅಂಬಾರಿ ಹೊರುವ ಅರ್ಜುನನಿಗೆ ಒಂದು ಟೈಮ್‍ಗೆ 25ರಿಂದ 30 ಕೆಜಿ ನೀಡಲಾಗುತ್ತದೆ. ಇದರೊಂದಿಗೆ ಹೆಣ್ಣಾನೆಗಳನ್ನು ಹೊರತುಪಡಿಸಿ ಗಂಡಾನೆಗಳಿಗೆ ಅರ್ಧ ಕೆಜಿ ಯಂತೆ ದಿನಕ್ಕೆ ಒಂದು ಕೆಜಿ ಬೆಣ್ಣೆಯನ್ನು ನೀಡಲಾಗುತ್ತಿದೆ. ಅರ್ಜುನನಿಗೆ ದಿನಕ್ಕೆ ಒಂದೂವರೆ ಕೆಜಿ ಬೆಣ್ಣೆ ನೀಡಲಾಗುತ್ತಿದೆ. ಪೌಷ್ಟಿಕ ಆಹಾರದೊಂದಿಗೆ ಒಂದು ಆನೆಗೆ ದಿನಕ್ಕೆ 450ರಿಂದ 600 ಕೆಜಿ ಆಲದಸೊಪ್ಪು, 250 ಕೆಜಿ ಹಸಿ ಹುಲ್ಲು, 50 ಕೆಜಿ ಭತ್ತದ ಹುಲ್ಲನ್ನು ನೀಡುವ ಮೂಲಕ ತಯಾರಿ ಮಾಡಲಾಗುತ್ತದೆ.