ಸುಳ್ವಾಡಿಯ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಲು ಒತ್ತಾಯ

ಸುಳ್ವಾಡಿಯ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಲು ಒತ್ತಾಯ

LK   ¦    Jan 09, 2019 07:30:14 PM (IST)
ಸುಳ್ವಾಡಿಯ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಲು ಒತ್ತಾಯ

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಬಳಿಕ ಸಂತ್ರಸ್ತರ ನೆರವಿಗಾಗಿ ಸುಳ್ವಾಡಿ ದುರಂತ ಹೋರಾಟ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು ಇದೀಗ ಈ ಸಂಸ್ಥೆಯು ಸಂಘ, ಸಂಸ್ಥೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಸಭೆಯನ್ನು ಕರೆದು ಚರ್ಚೆ ನಡೆಸುವ ಮೂಲಕ ಸಂತ್ರಸ್ತರಿಗೆ ಇನ್ನೂ ಹೆಚ್ಚಿನ ನೆರವು ನೀಡಬೇಕೆಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದೆ.

ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿತರಿಸಿದ ವಿಷ ಪ್ರಸಾದದಿಂದ 17 ಮಂದಿ ಭಕ್ತರು ಮೃತಪಟ್ಟಿದ್ದು, ನೂರಾರು ಮಂದಿ ಅಸ್ವಸ್ಥರಾಗಿದ್ದಾರೆ. ಈ ಸಂಬಂಧ ಜಿಲ್ಲೆಯ ಎಲ್ಲಾ ದಲಿತ ಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ಬಹುಜನ ಸಂಘ ಹಾಗೂ ಇತರ ಎಲ್ಲಾ ಸಂಘಟನೆಗಳು ಡಿ. 28ರಂದು ಸಭೆ ಸೇರಿ ಸುಳ್ವಾಡಿ ದುರಂತ ಹೋರಾಟ ವೇದಿಕೆ ರಚಿಸಿಕೊಂಡು ಜ.4 ರಂದು ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಸುಳ್ವಾಡಿ ಗ್ರಾಮಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿದ್ದೇವೆ.

ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸಿ ನೊಂದವರಿಗೆ ಪರಿಹಾರ ಮತ್ತು ಚಿಕಿತ್ಸೆ ಕೊಡಿಸಲು ಕ್ರಮ ವಹಿಸಿರುವುದು ಶ್ಲಾಘನೀಯ. ಆದರೂ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅಲ್ಲಿನ ಜನರಿಗೆ ಮೂಲ ಸೌಲಭ್ಯಗಳೇ ಈವರೆಗೂ ದೊರೆತಿಲ್ಲ. ಜನ ಅತ್ಯಂತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಈ ಸಂಬಂಧ ತಮ್ಮ ಅಧ್ಯಕ್ಷತೆಯುಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಹೆಚ್ಚಿನ ನೆರವು ನೀಡಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಎಂ.ನಾಗರಾಜು, ಪಿ.ಸಂಘಸೇನ, ರಾಮಸಮುದ್ರ ಸುರೇಶ್, ನಿಜಧ್ವನಿ ಗೋವಿಂದರಾಜು, ಪರ್ವತ್‍ರಾಜು, ಕರ್ನಾಟಕಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಕಂದಹಳ್ಳಿ ನಾರಾಯಣ್ ಸೇರಿದಂತೆ ಹಲವರು ಇದ್ದರು.